ರಾಜ್ಯ ಸಾರಿಗೆ ದೇಶಕ್ಕೆ ಮಾದರಿ

27Raibag1 Photo-Web
ರಾಯಬಾಗ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣ ಉದ್ಘಾಟನೆ ಹಾಗೂ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಸಮಾರಂಭವನ್ನು ಬುಧವಾರ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಶಾಸಕರಾದ ದುರ್ಯೋಧನ ಐಹೊಳೆ, ಪಿ.ರಾಜೀವ್, ಸುಜಾತಾ ಪಾಟೀಲ, ಸದಾಶಿವ ತೇಲಿ, ಕೃಷ್ಣ ಭಾಜಪೇಯಿ, ಟಿ.ಕೆ.ಪಾಲನೇತ್ರ ನಾಯಕ್, ಎಂ.ಆರ್.ಮಾಯಣ್ಣವರ ಇತರರು ಇದ್ದರು.
Published on

ರಾಯಬಾಗ: ಕರೊನಾ ಲಾಕ್‌ಡೌನ್ ಸಮಯದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದರೂ ರಾಜ್ಯ ಸರ್ಕಾರದ ಸಹಾಯದಿಂದ ಸಿಬ್ಬಂದಿಗೆ ವೇತನ ಪಾವತಿ ಮಾಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸ್ ನಿಲ್ದಾಣ ಉದ್ಘಾಟನೆ ಹಾಗೂ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾರಿಗೆ ಇಲಾಖೆಯ ಎಲ್ಲ ಸಿಬ್ಬಂದಿಯು ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡಿದ್ದರಿಂದ ರಾಜ್ಯ ಸಾರಿಗೆ ದೇಶದಲ್ಲೇ ಮಾದರಿಯಾಗಿದೆ. ಅದರ ಶ್ರೇಯಸ್ಸು ನಾಲ್ಕೂ ನಿಗಮದ ಸಾರಿಗೆ ಸಿಬ್ಬಂದಿಗೆ ಸಲ್ಲಬೇಕು ಎಂದರು.

ಸರ್ಕಾರದಿಂದ 2,980 ಕೋಟಿ ರೂ.ಬರಬೇಕಿದೆ: ಸಾರ್ವಜನಿಕರು ಹೆಚ್ಚಾಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮೂಲಕ ಸಂಸ್ಥೆಯು ಆರ್ಥಿಕವಾಗಿ ಸದೃಢವಾಗಲು ಕೈಜೋಡಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಲಾಗುತ್ತಿದೆ. 2014 ರಿಂದ ಇಲ್ಲಿವರೆಗೆ ಸರ್ಕಾರದಿಂದ 2,980 ಕೋಟಿ ರೂ. ಬರಬೇಕಾಗಿದೆ. ಆದರೂ ಇಲ್ಲಿವರೆಗೂ ಸರ್ಕಾರ ಹಣ ನೀಡದೇ ಇರುವುದರಿಂದ ಸಂಸ್ಥೆಗೆ ನಷ್ಟವಾಗಿದೆ ಎಂದ ಅವರು, ಅಥಣಿ-ಬೆಂಗಳೂರು ಬಸ್ ಅನ್ನು 3 ದಿನಗಳಲ್ಲಿ
ರಾಯಬಾಗ ಮಾರ್ಗವಾಗಿ ಓಡಿಸಲಾಗುವುದು ಎಂದು ಭರವಸೆ ನೀಡಿದರು.
ಹಾರೂಗೇರಿ ತಾಲೂಕು ಘೋಷಣೆ ಮಾಡಲು ಕುಡಚಿ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದರಿಂದ, ಹಾರೂಗೇರಿಯಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಸವದಿ ತಿಳಿಸಿದರು.
ತರಬೇತಿ ಕೇಂದ್ರ ಸ್ಥಾಪನೆ: ಚಾಲಕರಿಗೆ ಅಪಘಾತ ರಹಿತ ಚಾಲನೆ ಸಲುವಾಗಿ ಅಥಣಿ, ಮುಧೋಳ, ಕೊಪ್ಪಳ ಮತ್ತು ಕಲಬುರ್ಗಿಯಲ್ಲಿ ತಲಾ 15 ಕೋಟಿ ರೂ. ಅನುದಾನದಲ್ಲಿ ಚಾಲಕರ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. 7.50 ಕೋಟಿ ರೂ.ಅನುದಾನದಲ್ಲಿ ಅಥಣಿ, ಚಿಕ್ಕೋಡಿ, ಜಮಖಂಡಿ, ಬಾಗಲಕೋಟೆ ಮತ್ತು ಹಾವೇರಿಗೆ ಡ್ರೈವಿಂಗ್ ಲೈಸನ್ಸ್ ಅಟೋಮ್ಯಾಟಿಕ್ ಟ್ರ್ಯಾಕ್ ಅಳವಡಿಸಲಾಗುತ್ತಿದೆ ಎಂದರು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಬಸ್ ನಿಲ್ದಾಣದ ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಅಲ್ಲಿ ಮಳಿಗೆ ನಿರ್ಮಿಸಲು, ಭೆಂಡವಾಡ, ಕರಗಾಂವ, ಹನುಮಾನ ಏತ ನೀರಾವರಿ ಯೋಜನೆ ಬಜೆಟ್‌ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು. ಕುಡಿಯುವ ನೀರಿನ ಮಲ್ಟಿವಿಲೇಜ್ ಸ್ಕೀಂನಡಿ ಬಿರನಾಳ ಮಲ್ಟಿವಿಲೇಜ್ ಸ್ಕೀಂನಲ್ಲಿ 13 ಗ್ರಾಮ ಹಾಗೂ ಕೆಂಪಟ್ಟಿ ಮಲ್ಟಿವಿಲೇಜ್ ಸ್ಕೀಂನಲ್ಲಿ 4 ಗ್ರಾಮಗಳಿದ್ದು, ಅದಕ್ಕೆ ಅನುಮೋದನೆ ಒದಗಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಶಾಸಕ ಪಿ.ರಾಜೀವ್ ಹಾಗೂ ಹುಬ್ಬಳ್ಳಿ ವಾ.ಕ.ರ.ಸಾ.ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿದರು. ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ಸಂಕೇಶ್ವರ, ನಿಪ್ಪಾಣಿ, ರಾಯಬಾಗ, ಗೋಕಾಕ, ಅಥಣಿ ಘಟಕಗಳ 115 ಬಸ್ ಚಾಲಕರಿಗೆ ಬೆಳ್ಳಿ ಪದಕ ನೀಡಲಾಯಿತು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಪಾಟೀಲ, ಹುಬ್ಬಳ್ಳಿ ವಾ.ಕ.ರ.ಸಾ.ಸಂಸ್ಥೆ ನಿರ್ದೇಶಕ ಸದಾಶಿವ ತೇಲಿ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಟಿ.ಕೆ.ಪಾಲನೇತ್ರ ನಾಯಕ್, ಎಂ.ಆರ್.ಮಾಯಣ್ಣವರ, ಇಮ್ತಿಯಾಜ್ ನನದಿ, ತಹಸೀಲ್ದಾರ್ ಎನ್.ಬಿ.ಗೆಜ್ಜಿ, ಎ.ಆರ್.ಛಬ್ಬಿ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಸಿ.ಬಿ.ಕೋರೆ ಸ.ಸ.ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ, ತಾತ್ಯಾಸಾಬ ಕಾಟೆ, ಅರುಣ ಐಹೊಳೆ ಸೇರಿ ಸಾರಿಗೆ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net