

ಬೀದರ್: ತುಟ್ಟಿ ಭತ್ಯೆ ಹೆಚ್ಚಳದ ಮೂಲಕ ರಾಜ್ಯ ಸರ್ಕಾರ ನೌಕರರ ಬೇಡಿಕೆಗೆ ಸ್ಪಂದಿಸಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇ 3.75 ರಷ್ಟು ತುಟ್ಟಿ ಭತ್ಯೆ ಏರಿಕೆ ಮಾಡಿ, ತುಟ್ಟಿ ಭತ್ಯೆಯನ್ನು ಮೂಲ ವೇತನದ ಶೇ 27.25 ರಿಂದ ಶೇ 31ಕ್ಕೆ ಹೆಚ್ಚಿಸಿದ್ದಾರೆ. ಜುಲೈ 1 ರಿಂದಲೇ ಅನ್ವಯಿಸುವಂತೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ತುಟ್ಟಿ ಭತ್ಯೆ ಏರಿಕೆಯಿಂದ ರಾಜ್ಯದ 5.20 ಲಕ್ಷ ಸರ್ಕಾರಿ ನೌಕರರು, ಸುಮಾರು 3 ಲಕ್ಷ ನಿಗಮ-ಮಂಡಳಿ-ಅನುದಾನಿತ ಸಂಸ್ಥೆಗಳ ನೌಕರರು, 4.50 ಲಕ್ಷ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸಂಘ ಮನವಿ ಸಲ್ಲಿಸಿದ 24 ಗಂಟೆಗಳೊಳಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ಮುಖ್ಯಮಂತ್ರಿ, ಸರ್ಕಾರದ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ನೌಕರರ ಬೇಡಿಕೆ ಈಡೇರಿಕೆಗೆ ಕಾರಣರಾದ ಸಂಘದ ರಾಜ್ಯ ಅಧ್ಯಕ್ಷ ಷಡಕ್ಷರಿ ಅವರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.