ರಾಜ್ಯ ಸರ್ಕಾರವೇ ಕಡಿಮೆ ಬಡ್ಡಿದರದಲ್ಲಿ ಕೊಡಲಿ ಸಾಲ

CTD DCC BANK
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ಸಾಲದ ನೆರವಿನ ಮೊತ್ತವನ್ನು ಕಡಿತಗೊಳಿಸಿರುವುದು, ರಿ-ಫೈನಾನ್ಸಿಂಗ್ ಕುರಿತಂತೆ ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳನ್ನು ಚಿಂತೆಗೆ ದೂಡಿದೆ.

ಕಳೆದ ಹಣಕಾಸು ಸಾಲಿನಲ್ಲಿ ರಾಜ್ಯದ ರೈತರಿಗೆ ಶೂನ್ಯ ಹಾಗೂ ಶೇ.3 ಬಡ್ಡಿ ದರದಲ್ಲಿ ಅಂದಾಜು 23 ಸಾವಿರ ಕೋಟಿ ರೂ. ಕೆಸಿಸಿ ಬೆಳೆಸಾಲ ಹಾಗೂ ಮಧ್ಯಮಾವಧಿ ಸಾಲ ಕೊಟ್ಟಿದ್ದ ಡಿಸಿಸಿ ಬ್ಯಾಂಕ್‌ಗಳು, ರಾಜ್ಯ ಸರ್ಕಾರದ ಈ ಬಾರಿಯ ಘೋಷಿತ ಗುರಿ 25 ಸಾವಿರ ಕೋಟಿ ರೂ. ವಿತರಿಸಲು ಸಾಧ್ಯವಾಗುವುದೇ ಎಂಬ ಪ್ರಶ್ನೆ ಎದುರಿಸುತ್ತಿವೆ.

ಇತರೆ ಸಹಕಾರಿ ಸಂಸ್ಥೆಗಳಂತೆ ವಾಣಿಜ್ಯ ಉದ್ದೇಶಕ್ಕೆಂದೇ ಸಾಲ ವಿತರಿಸಿದರೆ ಡಿಸಿಸಿ ಬ್ಯಾಂಕ್‌ಗಳಿಂದಲೂ ಆದಾಯಗಳಿಕೆಯಲ್ಲಿ ಉತ್ತಮ ಸಾಧನೆ ಸಾಧ್ಯವಾಗಲಿದೆ. ಆದರೆ, ಶೇ.70 ಕ್ಕೂ ಅಧಿಕ ಮೊತ್ತವನ್ನು ರಾಜ್ಯ ಸರ್ಕಾರದ ನಿರ್ದೇಶನದಂತೆ ರೈತರಿಗೆ ಅಲ್ಪಾವಧಿ ಬೆಳೆ ಸಾಲ, 5 ವರ್ಷ 10-15ಲಕ್ಷ ರೂ.ವರೆಗೆ ಭೂ ಅಭಿವೃದ್ಧಿ ಅಥವಾ ಮಧ್ಯಮಾವಧಿ ಸಾಲ ವಿತರಿಸುತ್ತಿವೆ.

ಹೀಗೆ ವಿತರಿಸುವ ಸಾಲದ ಮೊತ್ತ ಹಾಗೂ ಗಳಿಸುವ ಆದಾಯಕ್ಕೂ ಅಜಗಜಾಂತರ ವ್ಯತ್ಯಾಸವಾಗುತ್ತಿದೆ ಎಂಬ ಕಳವಳ ಡಿಸಿಸಿ ಬ್ಯಾಂಕ್‌ಗಳಲ್ಲಿದೆ.

ಬೆಳೆ ಸಾಲಕ್ಕಾಗಿ ಸಹಜವಾಗಿಯೇ ರೈತರು ಡಿಸಿಸಿ ಬ್ಯಾಂಕ್‌ಗಳನ್ನು ನೆಚ್ಚಿಕೊಂಡಿದ್ದು, ನಬಾರ್ಡ್ ಕ್ರಮದಿಂದಾಗಿ ಈ ಬ್ಯಾಂಕ್‌ಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿ, ಬಂಡವಾಳದ ಕೊರತೆ ಉಂಟಾಗುತ್ತಿದೆ. ಒಂದೆಡೆ ಠೇವಣಿ ಸಂಗ್ರಹ ಅಷ್ಟಕಷ್ಟೇ. ಕಳೆದ ಬಾರಿ ನಬಾರ್ಡ್ ರಾಜ್ಯಕ್ಕೆ 5600 ಕೋಟಿ ರೂ. ಕೊಟ್ಟಿತ್ತು. ಆದರೆ, ಅದರಲ್ಲಿ ಈ ಬಾರಿ 3260 ಕೋಟಿ ರೂ. ಕಡಿತಗೊಳಿಸಿದೆ.

ಇದರಿಂದ ರೈತರಿಗೆ ಕೊಡುತ್ತಿದ್ದ ಸಾಲದ ಪ್ರಮಾಣಕ್ಕೆ ಅನುಗುಣವಾಗಿ ಈ ಬ್ಯಾಂಕ್‌ಗಳಿಗೆ ಸಿಗುತ್ತಿದ್ದ ನೆರವಿನ ಮೊತ್ತವೂ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಒಂದೆಡೆ ಕಡಿಮೆಯಾಗಿರುವ ಮೊತ್ತ ಸರಿದೂಗಿಸುವುದು ಹೇಗೆ? ಹೊಸ ರೈತರಿಗೆ ಬೆಳೆ ಸಾಲ ಸಹಿತ ಸರ್ಕಾರದ ಗುರಿ ಈಡೇರಿಸಲು ಸಾಧ್ಯವಾಗುವುದೇ ಎಂಬ ಪ್ರಶ್ನೆಗಳಿಗೆ ಬ್ಯಾಂಕ್‌ಗಳು ಉತ್ತರದ ಹುಡುಕಾಟದಲ್ಲಿವೆ.

ರಾಜ್ಯ ಸರ್ಕಾರ ಶೇ.7 ರಿಂದ 7.50 ಬಡ್ಡಿ ಸಹಾಯಧನದ ಮೊತ್ತವನ್ನು ಹೆಚ್ಚಿಸಬೇಕು. ವಿವಿಧ ಜಿಲ್ಲೆಗಳಲ್ಲಿರುವ ನಾನಾ ಯೋಜನೆಗಳ ಕೋಟ್ಯಂತರ ರೂ. ಅನುದಾನದಲ್ಲಿ ಕನಿಷ್ಠ ಶೇ.25 ರಷ್ಟನ್ನಾದರೂ ಠೇವಣಿ ಇಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸುವ ಮೂಲಕ ರಾಜ್ಯ ಸರ್ಕಾರ ನೆರವಿಗೆ ಬರಬೇಕು ಅಥವಾ ಕಡಿಮೆ ಬಡ್ಡಿದರದಲ್ಲಿ ಸಾಲವನ್ನಾದರೂ ಬ್ಯಾಂಕ್‌ಗಳಿಗೆ ಕೊಡಬೇಕೆಂಬ ಕೂಗು ಡಿಸಿಸಿ ಬ್ಯಾಂಕ್‌ಗಳ ವಲಯದಲ್ಲಿ ವ್ಯಾಪಕವಾಗುತ್ತಿದೆ.

.

ಅಭಿವೃದ್ಧಿ ಸಾಲಕ್ಕೂ ಬೇಡಿಕೆ

ಶೇ.3 ಬಡ್ಡಿ ದರದ ಭೂ ಅಭಿವೃದ್ಧಿ ಸಾಲಕ್ಕೂ ಬೇಡಿಕೆ ಅಧಿಕವಾಗುತ್ತಿದೆ. ಒಂದೆಡೆ ಈ ಸಾಲದ ಮರು ಪಾವತಿ ಉತ್ತಮವಾಗಿದ್ದರೆ, ಮತ್ತೊಂದೆಡೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆಯಂತೆ. ಮರು ಪಾವತಿ ಮತ್ತು ಬೇಡಿಕೆ ನಡುವಿನ ವ್ಯತ್ಯಾಸ ಸರಿದೂಗಿಸಲು ಕೂಡ ಸರ್ಕಾರ ನೆರವಿಗೆ ಮುಂದಾಗಬೇಕಿದೆ ಎನ್ನುತ್ತಾರೆ ಹೆಸರು ಹೇಳಲು ಬಯಸದ ಡಿಸಿಸಿ ಬ್ಯಾಂಕೊಂದರ ಹಿರಿಯ ಅಧಿಕಾರಿಯೊಬ್ಬರು.

ನಬಾರ್ಡ್ ಶೇ.4.5 ಸಾಲ ಕೊಡುತ್ತದೆ. ಅಪೆಕ್ಸ್ ಬ್ಯಾಂಕ್ ಅದಕ್ಕೆ ಶೇ.0.4 ಬಡ್ಡಿ ವಿಧಿಸಿ ನಮ್ಮ ಬ್ಯಾಂಕ್‌ಗಳಿಗೆ ಹಂಚಿಕೆ ಮಾಡುತ್ತದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳ ವಿಭಜನೆ ಬಳಿಕ ದಾವಣಗೆರೆ ಹೊರತುಪಡಿಸಿ ಉಳಿದೆಡೆ ಹೊಸ ಡಿಸಿಸಿ ಬ್ಯಾಂಕ್‌ಗಳು ಸ್ಥಾಪನೆಯಾಗಿಲ್ಲ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net