

ಎನ್.ಆರ್.ಪುರ: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಆಶ್ರಯ ಯೋಜನೆಯಡಿ ಹಣ ನೀಡಿದವರಿಗೆ ನಿವೇಶನ ಹಂಚಲಾಗುತ್ತಿದೆ ಎಂದು ಪಪಂ ಮಾಜಿ ಅಧ್ಯಕ್ಷ ಬಿ.ಎಸ್.ಆಶೀಶ್‌ಕುಮಾರ್ ಆರೋಪಿಸಿದರು.
ಶುಕ್ರವಾರ ಪಟ್ಟಣ ಪಂಚಾಯಿತಿ ಎದುರು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಆಶ್ರಯ ಯೋಜನೆಯ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಶಾಸಕರೇ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಭ್ರಷ್ಟ ಸರ್ಕಾರವನ್ನು ರಾಜ್ಯಪಾಲರು ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಅರ್ಹರಿಗೆ ನಗರ ವಸತಿ ಯೋಜನೆಯಡಿ ನಿವೇಶನ ಹಂಚಿಕೆಯಾಗಿಲ್ಲ. ಈ ಹಿಂದಿನ ಅವಧಿಯಲ್ಲಿ ಪಾರದರ್ಶಕವಾಗಿ ಪರಿಶೀಲನೆ ಮಾಡಿ ಅಂತಿಮಗೊಳಿಸಲಾಗಿತ್ತು. ಆದರೆ ಈಗಿನ ಶಾಸಕರು ಮತ್ತು ಎನ್.ಆರ್.ಪುರ ಪಪಂ ಆಡಳಿತ ಪಕ್ಷದ ಸದಸ್ಯರು ಅವರಿಗೆ ಮನಬಂದಂತೆ ನಿವೇಶನ ಮತ್ತು ಮನೆಗಳನ್ನು ಹಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಮನವಿ ಪತ್ರವನ್ನು ಪಪಂ ಮುಖ್ಯಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಪಪಂ ಸದಸ್ಯರಾದ ರೇಖಾ ಮಂಜುನಾಥ, ರೀನಾ ಮೋಹನ್, ಮಾಜಿ ಅಧ್ಯಕ್ಷ ಆರ್.ರಾಜಶೇಖರ್, ರಾಜೇಂದ್ರ, ವೈ.ಎಸ್.ರವಿ, ವಾಲ್ಮೀಕಿ ಶ್ರೀನಿವಾಸ್, ಮಂಜುನಾಥ, ಕೃಷ್ಣಯ್ಯ ಆಚಾರ್, ಅರುಣ್ ಜೈನ್, ಪೌಲ್ ಚರಿಯಾನ್, ಮಂಜುನಾಥ ಲಾಡ್ ಇತರರಿದ್ದರು.