ರಾಜ್ಯ ಸರ್ಕಾರದಿಂದ ಶೂನ್ಯ ಸಾಧನೆ

19 ckm 4
ಚಿಕ್ಕಮಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧದ ಆರೋಪಗಳ ಪಟ್ಟಿ ಬಿಡುಗಡೆ ಮಾಡಿದರು. ಎಂ.ಆರ್.ದೇವರಾಜಶೆಟ್ಟಿ, ಎಚ್.ಸಿ.ಕಲ್ಮರುಡಪ್ಪ, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಯಾವುದೇ ಅಭಿವೃದ್ಧಿ ಇಲ್ಲದ ಪರಿಣಾಮ ರಾಜ್ಯದ ಜನರು ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನರ ತೆರಿಗೆ ಹಣದಲ್ಲಿ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಲೀಟರ್‌ಗೆ ೯ರೂ., ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್ ಮೇಲಿನ ರಾಜ್ಯದ ಸುಂಕ ಹೆಚ್ಚಳ, ಕುಡಿಯುವ ನೀರು ದರ, ಆಸ್ತಿ ತೆರೆಗೆ ಹೆಚ್ಚಳ, ವಿದ್ಯುತ್ ದರ ಏರಿಕೆ, ಪ್ರಯಾಣದ ಬಸ್ -ಮೆಟ್ರೋ ಪ್ರಯಾಣ ದರ ಹೆಚ್ಚಳ, ಬಿತ್ತನೆ ಬೀಜ, ಟಿಸಿ ಸಂಪರ್ಕ ಬಲು ದುಬಾರಿ, ದಿನ ಬಳಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಬಡವರು, ಮಧ್ಯಮ ವರ್ಗದವರ ಜೇಬಿಗೆ ಸರ್ಕಾರ ಕತ್ತರಿ ಹಾಕಿರುವುದು ಸರ್ಕಾರದ ಸಾಧನೆಯೇ ಎಂದು ಬೆಲೆ ಏರಿಕೆ ವಿರುದ್ಧ ಹರಿಹಾಯ್ದರು.

ಮೂಡ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಕಾರ್ಮಿಕ ಇಲಾಖೆ ಹಗರಣ, ಎಸ್ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.೪ರಷ್ಟು ಮೀಸಲಾತಿ ಕೊಟ್ಟಿರುವುದು ಸರ್ಕಾರದ ಸಾಧನೆಯೇ ಎಂದು ಸಿಎಂ ಮತ್ತು ಉಪ ಮುಖ್ಯ ಮಂತ್ರಿಗೆ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದಿಂದ ಕಿರುಕುಳ, ಕಮಿಷನ್ ದಾಹಕ್ಕೆ ಬಲಿಯಾದ ಪ್ರಾಮಾಣಿಕ ಅಧಿಕಾರಿಗಳು, ಹಾಗೂ ಗುತ್ತಿಗೆದಾರರ ಸಾವುಗಳು, ಕಳಪೆ ಔಷಧ ಪೂರೈಕೆಯಿಂದ ೪೬೦ಕ್ಕೂ ಹೆಚ್ಚು ಬಾಣಂತಿಯರು ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಕ್ಕೆ ಸಾಧನಾ ಸಮಾವೇಶದ ಮೂಲಕ ಸಂಭ್ರಮಾಚರಣೆಯೇ ಎಂದು ಆರೋಪಗಳ ಸುರಿಮಳೆಗೈದರು.

ಕಳೆದ ೨೪ ತಿಂಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಕ್ಫ್ ಮಂಡಳಿ ಹೆಸರಿನಲ್ಲಿ ಮಠ ಮಂದಿರಗಳು ರೈತರ ಜಮೀನು ಕಬಳಿಸಿರುವುದು ಸಾಧನೆಯೇ? ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎಡವಟ್ಟುಗಳ ಮೇಲೆ ಎಡವಟ್ಟುಗಳನ್ನು ಮಾಡಿ ಲಕ್ಷಾಂತರ ಯುವಕರ ಕನಸು ನುಚ್ಚುನೂರು ಮಾಡುವ ಮೂಲಕ ಅವರ ಭವಿಷ್ಯ ಹಾಳು ಮಾಡಿರುವುದು ಸರ್ಕಾರದ ಸಾಧನೆಯೇ ಎಂದು ವಾಗ್ದಾಳಿ ನಡೆಸಿದರು.

ಗುತ್ತಿಗೆದಾರರ ಬಿಲ್ ಪಾವತಿಗೆ ದುಡ್ಡಿಲ್ಲ, ರಸ್ತೆ ಗುಂಡಿ ಮುಚ್ಚಲು ದುಡ್ಡಿಲ್ಲ, ಸಾರಿಗೆ ನೌಕರರ ಸಂಬಳಕ್ಕೆ ದುಡ್ಡಿಲ್ಲ, ಆಂಬುಲೆನ್ಸ್ ಚಾಲಕರ ಸಂಬಳಕ್ಕೆ ದುಡ್ಡಿಲ್ಲ, ಹಾಲು ಉತ್ಪಾದಕರ ಬಾಕಿ ಪಾವತಿಗೆ ದುಡ್ಡಿಲ್ಲ, ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗೆ ದುಡ್ಡಿಲ್ಲ, ಎನ್‌ಎಚ್‌ಎಂ ನೌಕರರ ಸಂಬಳಕ್ಕೆ ದುಡ್ಡಿಲ್ಲ, ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲ, ಖಜಾನೆ ಖಾಲಿಯಾಗಿರುವ ಪರಿಣಾಮ ಕರ್ನಾಟಕದಿಂದ ಪ್ರಮುಖ ಕೈಗಾರಿಕೆಗಳು ವಲಸೆ ಹೋಗುತ್ತಿರುವುದು ಸರ್ಕಾರದ ಸಾಧನೆ ಎಂದು ಟೀಕಿಸಿದರು.

ಜನರ ತೆರಿಗೆ ಹಣವನ್ನು ಪಂಚ ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆಯೇ ವಿನಾ ಯಾರz್ದೆÃ ಫಾದರ್ ಜೆಬಿನ ಹಣವಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಎಲ್ಲ ಕ್ಷೇತ್ರಗಳಲ್ಲೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವೈಫಲ್ಯವಾಗಿರುವ ಹುಳುಕುಗಳನ್ನು ಮುಚ್ಚಿಕೊಳ್ಳಲು ಜನರ ತೆರಿಗೆ ಹಣದಲ್ಲಿ ಸಾಧನ ಸಮಾವೇಶದ ಮೂಲಕ ಕಾಂಗ್ರೆಸ್ ಸರ್ಕಾರ ಸಂಭ್ರಮಿಸುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಆರ್. ದೇವರಾಜಶೆಟ್ಟಿ, ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಮುಖಂಡ ಜೆ. ಡಿ.ಲೋಕೇಶ್, ಮಾಧ್ಯಮ ಪ್ರಮುಖ ದಿನೇಶ್ ಕೋಟೆ, ಮುಖಂಡ ಸಚಿನ್ ಉಪಸ್ಥಿತರಿದ್ದರು.

ಅತಿ ಹೆಚ್ಚು ಸಾಲ ಮಾಡಿದ್ದು ಸಿದ್ದರಾಮಯ್ಯ

ರಾಜ್ಯದ ಒಟ್ಟು ಸಾಲ ೭.೬೪ಲಕ್ಷ ಕೋಟಿ ರೂ. ಇದೆ. ಇದರಲ್ಲಿ ೩.೯೦ ಲಕ್ಷ ಕೋಟಿ ರೂ. ಸಾಲ ಮಾಡಿರುವುದು ಸಿಎಂ ಸಿದ್ದರಾಮಯ್ಯ ಒಬ್ಬರೇ. ಅಂದರೆ ರಾಜ್ಯದ ಸಾಲದಲ್ಲಿ ಶೇ. ೫೦ಕ್ಕೂ ಹೆಚ್ಚು ಸಾಲವನ್ನು ಸಿದ್ದರಾಮಯ್ಯ ಒಬ್ಬರೇ ಮಾಡಿದ್ದಾರೆ. ಇದೇ ಅವರ ಸಾಧನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿಯೂ ವೈಫಲ್ಯವಾಗಿರುವುದು ಎದ್ದು ಕಾಣುತ್ತಿದೆ. ಕ್ರಮಿನಲ್ ಮತ್ತು ಕಮ್ಯುನಲ್ ಕ್ರೆÊಮ್ ಮೇಲುಗೈ ಸಾಧಿಸಿವೆ. ಇಂಥ ಸಂದರ್ಭದಲ್ಲಿ ಸರ್ಕಾರ ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾತ್ರೆ ಮಾಡಲು ಹೊರಟಿದೆ ಎಂದು ಟೀಕಿಸಿದರು.

ಸಿದ್ಧಾಂತ ಇಟ್ಟುಕೊಂಡು ರಾಜಕಾರಣ

ನಾನು ಸಿದ್ಧಾಂತ ಇಟ್ಟುಕೊಂಡು ರಾಜಕಾರಣ ಮಾಡುತ್ತಿz್ದÉÃನೆ. ಆದರೆ ಕೆಲವರು ಯಾರ ಬಳಿ ಅಧಿಕಾರ ಇರುತ್ತದೆಯೋ ಅವರಿಗೆ ಬಕೆಟ್ ಹಿಡಿದು ಅಧಿಕಾರ ಪಡೆದುಕೊಂಡಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಹಿಂದೆ ನನ್ನ ಹಿಂದೆಯೂ ಇದ್ದರು. ಬಳಿಕ ಬೇರೆಯವರ ಬಳಿ ಸೇರಿಕೊಂಡು ಅಧಿಕಾರ ಪಡೆದಿದ್ದಲ್ಲದೆ. ಅಧಿಕಾರ ಇದ್ದವರಿಗೆ ಬಕೆಟ್ ಹಿಡಿದುಕೊಂಡು ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರಕ್ಕೆ ಧೈರ್ಯ ಇದ್ದರೆ ತಾನು ಮಾಡಿರುವ ಸಾಲದ ಬಗ್ಗೆ, ಬೆಲೆ ಏರಿಕೆ ಬಗ್ಗೆ, ಭ್ರಷ್ಟಾಚಾರ ಹಾಗೂ ಹಗರಣಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಜೊತೆಗೆ ಸಮರ್ಪಣಾ ಸಮಾವೇಶದಲ್ಲಿಯೇ ಈ ಬಗ್ಗೆ ಜನರಿಗೆ ಉತ್ತರ ನೀಡಬೇಕು. ಅದನ್ನು ಬಿಟ್ಟು ತನ್ನ ವೈಫಲ್ಯ ಮುಚ್ಚಿಕೊಳ್ಳಲು ಜನರ ದುಡ್ಡಲ್ಲಿ ಸಮಾವೇಶ ಮಾಡುವುದು ಸರಿಯಲ್ಲ.

ಸಿ.ಟಿ.ರವಿ ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net