ರಾಜ್ಯ ಸರ್ಕಾರದಿಂದ ದ್ವೇಷದ ರಾಜಕಾರಣ

24 KRN-1
Published on

ಕೆ.ಆರ್.ನಗರ: ದ್ವೇಷದ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರದಂತಹ ಮತ್ತೊಂದು ಸರ್ಕಾರ ಹಿಂದೆ ಬಂದಿಲ್ಲ ಮುಂದೆಯೂ ಬರುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಪಟ್ಟಣದ ಡಾ.ರಾಜ್ ಬಾನಂಗಳದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಿವಿಧ ವಸ್ತುಗಳ ಮೇಲೆ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ ರಾಜ್ಯದ ಜನರನ್ನು ಬೀದಿಗೆ ನಿಲ್ಲಿಸಿ ಸಂಪೂರ್ಣವಾಗಿ ರಾಕ್ಷಸಿ ಆಡಳಿತ ತಂದಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸುಮಾರು 15 ಸಾವಿರ ಮಂದಿ ಯುವಕ, ಯುವತಿಯರು ಉದ್ಯೋಗಕ್ಕಾಗಿ ನನಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಪರಿಹರಿಸುವ ಸಲುವಾಗಿ ಕೇಂದ್ರ ಮಂತ್ರಿಯಾಗಿ ನಾನು ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ಆದರೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದರು.

ನಿರುದ್ಯೋಗ ಸಮಸ್ಯೆ ನೀಗಿಸುವ ಸಲುವಾಗಿ ರಾಜ್ಯದಲ್ಲಿ ಸ್ಥಗಿತಗೊಂಡಿರುವ ಕಾರ್ಖಾನೆಗಳನ್ನು ಪುನರಾರಂಭ ಮಾಡಿಸಲು ಕೇಂದ್ರ ಸರ್ಕಾರದಿಂದ ಆರ್ಥಿಕ ಸಹಕಾರ ಕೊಡಿಸಲು ಸಿದ್ಧನಿದ್ದೇನೆ. ಈ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ನಾಡಿನ ನಿರುದ್ಯೋಗಿ ಯುವ ಜನತೆಯ ಹಿತದೃಷ್ಟಿಯಿಂದ ನನ್ನ ಜೊತೆ ಕೈಜೋಡಿಬೇಕು ಎಂದು ಮನವಿ ಮಾಡಲಾಗಿದ್ದರೂ ದ್ವೇಷದ ರಾಜಕಾರಣ ಮಾಡುತ್ತಿರುವ ಸರ್ಕಾರ ನನಗೆ ಹೆಸರು ಬರುತ್ತದೆಂದು ಸಹಕಾರ ನೀಡುತ್ತಿಲ್ಲ ಎಂದು ದೂರಿದರು.

ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳು ಮಹಿಳೆಯರಿಗೆ ಎರಡು ಸಾವಿರ ರೂ. ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಎರಡು ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಘೋಷಿಸುವ ಯೋಜನೆಗಳಿಗೆ ಮತ್ತಷ್ಟು ಸಾಲ ಮಾಡುವ ನಿರೀಕ್ಷೆಯಿದ್ದು, ಸಿದ್ದರಾಮಯ್ಯನ ಸರ್ಕಾರ ರಾಜ್ಯದ ಜನತೆಯನ್ನು ಸಾಲದ ಸುಳಿಗೆ ಸಿಲುಕಿಸಲಿದೆ ಎಂದರು.

136 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಗಾದಿಯನ್ನು ಅಲಂಕರಿಸಿದ ಸಿದ್ದರಾಮಯ್ಯ ತಮ್ಮ ಕುರ್ಚಿ ಮಾತ್ರ ಭದ್ರಪಡಿಸಿಕೊಳ್ಳಲು ಆದ್ಯತೆ ನೀಡಿದ್ದಾರೆಯೇ ಹೊರತು ನಾಡಿನ ಜನರೆ ಹಿತ ಕಾಯುವಲ್ಲಿ ವಿಫಲಗೊಂಡಿದ್ದಾರೆ. ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದ ಕುಟುಂಬಗಳು ಆತ್ಮಹತ್ಯೆಗೆ ಶರಣಾಗಿರುವುದು ಇದಕ್ಕೆ ಉದಾಹರಣೆ ಎಂದು ಟೀಕಿಸಿದರು.

ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ ಹಲವು ರಾಜಕೀಯ ಸ್ಥಾನಮಾನಗಳನ್ನು ನೀಡಿದ ಎಚ್.ಡಿ.ದೇವೇಗೌಡರನ್ನು ದ್ವೇಷಿಸುವ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೇರಲು ಸಹಕಾರ ನೀಡಿದ ಎಚ್.ವಿಶ್ವನಾಥ್ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿರುವುದು ಎಷ್ಟು ಸರಿ? ಕನಿಷ್ಠ ಕೃತಜ್ಞತೆ ಇಟ್ಟುಕೊಳ್ಳದ ಸಿದ್ದರಾಮಯ್ಯ ದೇವೇಗೌಡರ ಕುಟುಂಬದ ಜತೆಗೆ ಮೈಸೂರು ರಾಜವಂಶಸ್ಥರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸೋಲುಂಡ ಸಾ.ರಾ.ಮಹೇಶ್ ಮುಂದೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲವೆಂದು ನನ್ನ ಬಳಿ ಹಲವಾರು ಬಾರಿ ಹೇಳಿದ್ದಾರೆ. ಆದರೆ ಅವರ ಸೇವೆ ಮೈಸೂರು ಜಿಲ್ಲೆ ಜನತೆಗೆ ಅವಶ್ಯಕವಾಗಿದ್ದು, ಈ ವಿಚಾರವನ್ನು ಅವರು ಅರಿತು ಚುನಾವಣಾ ರಾಜಕಾರಣದಲ್ಲಿ ಮುಂದುವರೆಯಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಕೋರಿದರು.

63 ವರ್ಷಗಳ ಕಾಲ ರಾಜಕಾರಣದಲ್ಲಿರುವ ಎಚ್.ಡಿ.ದೇವೇಗೌಡರು 16 ತಿಂಗಳು ಮುಖ್ಯಮಂತ್ರಿ, 11 ತಿಂಗಳು ಪ್ರಧಾನಮಂತ್ರಿ, ಎರಡೂವರೆ ವರ್ಷ ನೀರಾವರಿ ಮಂತ್ರಿಯಾಗಿ ಅಧಿಕಾರ ಮಾಡಿದ್ದನ್ನು ಹೊರತುಪಡಿಸಿದರೆ ಉಳಿದ ಅವಧಿ ವಿರೋಧ ಪಕ್ಷದಲ್ಲಿ ಕುಳಿತು ರಾಜ್ಯದ ಜನತೆಯ ಹಿತ ಕಾಯಲು ಶ್ರಮಿಸಿದ್ದಾರೆ. ಇದನ್ನು ಸಾ.ರಾ.ಮಹೇಶ್ ಅರಿಯಬೇಕೆಂದರು.

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಕುರುಬ ಸಮಾಜಗಳ ನಡುವೆ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧೆ ನಡೆಯಲಿದ್ದು, ಜಾತಿ ರಾಜಕಾರಣದಿಂದ ಅಭ್ಯರ್ಥಿಗಳ ಸೋಲು ಮತ್ತು ಗೆಲುವು ನಿರ್ಧಾರವಾಗುತ್ತಿದೆ. ಕುರುಬ ಸಮಾಜದ ಬಂಧುಗಳು ಸೇರಿದಂತೆ ಎಲ್ಲ ಸಮಾಜದವರು ಅಭಿವೃದ್ಧಿ ಮತ್ತು ಜನಸೇವೆ ಮಾಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಕೋರಿದರು.

ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಾನು ಚನ್ನಪಟ್ಟಣದ ಚುನಾವಣೆಗೆ ನಿಲ್ಲಬೇಕೆಂದುಕೊಂಡಿರಲಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯಕರ್ತರ ಒತ್ತಡದಿಂದ ಅವರ ಭಾವನೆಗಳಿಗೆ ಧಕ್ಕೆ ತರಬಾರದೆಂಬ ಉದ್ದೇಶದಿಂದ ಅನಿವಾರ್ಯವಾಗಿ ಸ್ಪರ್ಧಿಸಿ ಸೋಲು ಅನುಭವಿಸಿದೆ. ರಾಜ್ಯದ ಜನತೆಯ ಏಳಿಗೆಗಾಗಿ ಪ್ರಾದೇಶಿಕ ಪಕ್ಷ ಉಳಿಯಬೇಕು. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಅಪಪ್ರಸ್ತುತ. ರಾಜ್ಯದಲ್ಲಿರುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಕೈಜೋಡಿಸಲಿ ಎಂದು ಮನವಿ ಮಾಡಿದರು.

ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಶಾಸಕರಾದ ಜಿ.ಡಿ.ಹರೀಶ್‌ಗೌಡ, ಎಚ್.ವಿಶ್ವನಾಥ್, ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಎಂ.ಪಿ.ನಾಡಗೌಡ, ಡಾ.ಕೆ.ಅನ್ನದಾನಿ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವಿಗಾಗಿ ದುಡಿದ ವಿವಿಧ ಸಮುದಾಯಗಳ ಪರವಾಗಿ ಎ.ಎಸ್.ಚನ್ನಬಸಪ್ಪ, ಡಾ.ಮಹಬೂಬ್ ಖಾನ್, ಅರ್ಜುನಹಳ್ಳಿ ಗಣೇಶ್, ದೊಡ್ಡಕೊಪ್ಪಲು ನಾಗಣ್ಣ, ಕೃಷ್ಣಶೆಟ್ಟಿ, ದಾಸಶೆಟ್ಟಿ ಶ್ರೀನಿವಾಸ್, ಭಾಗ್ಯಶಂಕರ್, ಬೋರಶೆಟ್ಟಿ, ಮದನಲಾಲ್‌ಜೈನ್ ಮತ್ತಿತರರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕರಾದ ಕೆ.ಮಹದೇವ್, ಅಶ್ವಿನ್‌ಕುಮಾರ್, ವಿಧಾನಪರಿಷತ್ತಿನ ಸದಸ್ಯರಾದ ಕೆ.ವಿವೇಕಾನಂದ, ಸಿ.ಎನ್.ಮಂಜೇಗೌಡ, ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಪಂ ಮಾಜಿ ಸದಸ್ಯರಾದ ಅಚ್ಚುತಾನಂದ, ಅಮಿತ್ ವಿ.ದೇವರಹಟ್ಟಿ, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಯುವ ಘಟಕದ ಅಧ್ಯಕ್ಷ ಹಂಪಾಪುರ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net