

ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಐಎನ್‌ಡಿಐಎ ಸಂಬಂಧ ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಟ್ಟು ಸ್ಟಾಲಿನ್‌ಗೆ ನಮ್ಮ ಹಕ್ಕನ್ನು ಒತ್ತೆ ಇಟ್ಟಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ನಾಯಕರು ರೈತರ ಪರವಾಗಿ ನಿಲ್ಲುವುದಕ್ಕಿಂತ ಐಎನ್‌ಡಿಐಎ ಸಂಬಂಧ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ. ಅದಕ್ಕಾಗಿ ಯಾವ ತ್ಯಾಗ ಮಾಡಲು ಸಿದ್ಧರಿದ್ದಾರೆ. ಬೇಕಾದರೆ ರಾಜ್ಯವನ್ನೂ ತ್ಯಾಗ ಮಾಡುವ ಮನಸ್ಥಿತಿಗೆ ಬಂದಿದ್ದಾರೆ ಎಂದು ಆರೋಪಿಸಿದರು.
ಸ್ಟಾಲಿನ್ ಐಎನ್‌ಡಿಐಎ ಸಭೆ ಬರುವುದಿಲ್ಲ ಎಂಬ ಕಾರಣಕ್ಕೆ ತಮಿಳುನಾಡಿನವರು ನೀರು ಕೇಳುವ ಮುಂಚೆಯೇ ನೀರು ಬಿಟ್ಟಿದ್ದಾರೆ. ಕಾಂಗ್ರೆಸ್‌ನವರ ಕಾಲು ಗುಣವೇ ರಾಜ್ಯಕ್ಕೆ ಒಂದು ಶಾಪ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಬರಗಾಲ ಬರುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದು ಕಾಕತಾಳೀಯವೋ ಅಥವಾ ಕಾಲ್ಗುಣವೋ ಗೊತ್ತಿಲ್ಲ. ಈ ಬಾರಿಯೂ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಅದನ್ನು ಮರೆಮಾಚಲು ಕಾಗಕ್ಕ, ಗುಬ್ಬಕ್ಕ ಕಥೆ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.
ರೈತರು ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡುವ ಮೂಲಕ ಇಡೀ ರೈತ ಸಮೂಹವನ್ನು ಅಪಮಾನಿಸುವ ಕೆಲಸ ಮಾಡಿದ್ದಾರೆ. ಸಚಿವರ ಹೇಳಿಕೆ ಅಕ್ಷಮ್ಯ ಅಪರಾಧ. ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ರಾಜ್ಯದಲ್ಲಿ ಶೇ.70ಕ್ಕೂ ಹೆಚ್ಚು ಪ್ರದೇಶದಲ್ಲಿ ಬರಗಾಲವಿದೆ. ಕೆಲವು ಕಡೆಗಳಲ್ಲಿ ಅತಿವೃಷ್ಟಿ ಉಂಟಾಗಿದ್ದು, ಸರ್ಕಾರ ರೈತರ ಪರವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ಸರ್ಕಾರಕ್ಕೆ ಅನುಮತಿ ನೀಡಿದವರು ಯಾರು? ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಆ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸರ್ಕಾರ ಇದೆ ಎಂಬುದೇ ಅನ್ನಿಸುತ್ತಿಲ್ಲ. ಕೇಂದ್ರದ ಕಿಸಾನ್ ಸಮ್ಮಾನ್ ನಿಧಿಗೆ ಕೇಂದ್ರ ಜತೆಗೆ ನಾವು ನಾಲ್ಕು ಸಾವಿರ ರೂ. ಕೊಡುತ್ತಿದ್ದೆವು. ಅದನ್ನು ರದ್ದು ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ 14 ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದರೂ ರಾಜ್ಯದಲ್ಲಿ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಂಡಿಲ್ಲ. ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಲೋಕಸಭೆ ಚುನಾವಣೆವರೆಗೂ ಮೂಗಿಗೆ ತುಪ್ಪ ಸವರಿ ಮತ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರು ಶಾಶ್ವತ ಯೋಜನೆಗಳನ್ನು ತರುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದರು. ಆದರೆ ಅದೇ ಜಿಲ್ಲೆಯಿಂದ ಬಂದಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನೆನಪಿಸಿಕೊಳ್ಳುವುದಿಲ್ಲ. ಲೋಕಸಭೆ ಚುನಾವಣೆವರೆಗೂ ರಾಜ್ಯದ ಜನರಿಗೆ ಮಂಕುಬೂತಿ ಎರಚಲು ಯತ್ನಿಸುತ್ತಿದ್ದಾರೆ. ಆದರೆ ಈ ಬಾರಿ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಕೆ.ಸುರೇಶ್, ಮಾಜಿ ಶಾಸಕ ಪ್ರೀತಂ ಜೆ.ಗೌಡ ಮತ್ತಿತರರು ಹಾಜರಿದ್ದರು.