ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಆಕ್ರೋಶ

HUN-AUG-31-4(BJP STRIKE)
Published on

ಹುಣಸೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಕೇವಲ 3 ತಿಂಗಳಲ್ಲಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ತಾಲೂಕು ಟಕದ ಸದಸ್ಯರು ಪ್ರತಿಭಟನೆ ನಡೆಸಿದರು.


ನಗರದ ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಡಾ.ನವೀನ್, ಮುಂಗಾರು ವೈಫಲ್ಯಕ್ಕೆ ಕಂಗೆಟ್ಟು ಕೇವಲ ಎರಡು ತಿಂಗಳಲ್ಲಿ 42 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಬಿಜೆಪಿ ಸರ್ಕಾರ ನೀಡಿದ್ದ ಹಕ್ಕನ್ನು ಈ ಸರ್ಕಾರ ಕಸಿದುಕೊಳ್ಳುವ ಮೂಲಕ ದಲ್ಲಾಳಿಗಳ ಬೆನ್ನೆಲುಬಾಗಿ ನಿಂತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ರೂ.ಗಳೊಂದಿಗೆ ರಾಜ್ಯ ಬಿಜೆಪಿ ಸರ್ಕಾರ ನೀಡುತ್ತಿದ್ದ 4 ಸಾವಿರ ರೂ.ಗಳನ್ನು ಪ್ರಸ್ತುತ ರಾಜ್ಯ ಸರ್ಕಾರ ಹಿಂಪಡೆಯುವ ಮೂಲಕ ರೈತರಿಗೆ ಅನ್ಯಾಯವೆಸಗಿದೆ. ಇಂತಹ ರೈತವಿರೋಧಿ ಸರ್ಕಾರ ಮುಂದಿನ 5 ವರ್ಷಗಳಲ್ಲಿ ರೈತ ಸಂಕುಲವನ್ನೇ ನಾಶಮಾಡಲು ಹೊರಟಂತೆ ತೋರುತ್ತಿದೆ ಎಂದು ಕಿಡಿಕಾರಿದರು.


ಬಿಜೆಪಿ ತಾಲೂಕು ಅಧ್ಯಕ್ಷ ನಾಗಣ್ಣಗೌಡ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಸಂಪೂರ್ಣ ವಿಫಲಗೊಂಡಿದ್ದು, ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಬೇಕು. ಬರಕ್ಕೆ ತುತ್ತಾದ ಪ್ರದೇಶಗಳ ಸಮೀಕ್ಷೆ ಕೈಗೊಂಡು ರೈತರಿಗೆ ಪರಿಹಾರಧನ ವಿತರಿಸಬೇಕು. ಕೆರೆಕಟ್ಟೆಗಳನ್ನು ತುಂಬುವ ಕಾರ್ಯ ಶೀಘ್ರ ಕೈಗೊಳ್ಳಬೇಕು. ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಬೆಳೆ ಹಾನಿಯಾದ ರೈತರಿಗೆ ಶೀಘ್ರ ಪರಿಹಾರಧನ ವಿತರಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ತಹಸೀಲ್ದಾರ್ ಡಾ.ಎಸ್.ಯು. ಅಶೋಕ್‌ಗೆ ಮನವಿ ಪತ್ರ ಸಲ್ಲಿಸಲಾಯಿತು. ರೈತ ಮೋರ್ಚಾ ಗ್ರಾಮಾಂತರ ಅಧ್ಯಕ್ಷ ಪರಮೇಶ್, ನಗರಾಧ್ಯಕ್ಷ ಸೂರೇಗೌಡ, ಕಾರ್ಯದರ್ಶಿ ರಾಮಚಂದ್ರ, ಸತೀಶ್, ಬಿ.ಎನ್.ನಾಗರಾಜಪ್ಪ, ಹನಗೋಡು ಮಂಜುನಾಥ್, ಕಮಲಮ್ಮ, ಯಶೋದಮ್ಮ, ವೆಂಕಟಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net