

ಚಿತ್ರದುರ್ಗ: ಏಳನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ನೀಡದಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಮಿತಿಯ ನೂರಾರು ಮಂದಿ ಗುರುವಾರ ಪ್ರತಿಭಟನೆ ನಡೆಸಿದರು.
ಸಿಎಂ ಸಿದ್ದರಾಮಯ್ಯ ಗಮನ ಸೆಳೆಯಲು ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿರುವ ಜಾಥಾ ಚಿತ್ರದುರ್ಗ ಪ್ರವೇಶಿಸಿತು. ನಂತರ ಮೆರವಣಿಗೆ ನಡೆಸಿದರು. ಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
2022ರ ಜುಲೈ 1ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ಅಧಿಕಾರಿಗಳ, ಇನ್ನಿತರೆ ನೌಕರರ ಪರಿಷ್ಕೃತ ವೇತನ ಶ್ರೇಣಿಯನ್ವಯ ಸೌಲಭ್ಯ ನೀಡದೆ, ಸರ್ಕಾರ ನಿರ್ಲಕ್ಷಿಸಿದೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಷ್ಕರಣೆ ಕಾರಣಕ್ಕೆ ವೇತನ, ಭತ್ಯೆ ಹೆಚ್ಚಳವನ್ನು 2024ರ ಆಗಸ್ಟ್ 1ರಿಂದ ನಗದಾಗಿ ಪಾವತಿ ಮಾಡಬೇಕು. ಸೇವೆಯಿಂದ ನಿವೃತ್ತರಾದ, ಸೇವೆಯಲ್ಲಿರುವಾಗಲೆ ಮರಣ ಹೊಂದಿದ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸಲಾದ ಕಾಲ್ಪನಿಕ, ನಿವೃತ್ತಿ ಮತ್ತು ಕೌಟುಂಬಿಕ ನಿವೃತ್ತಿ ವೇತನವನ್ನು ಲೆಕ್ಕಚಾರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.
ವೇದಿಕೆ ರಾಜ್ಯ ಸಂಚಾಲಕ ಎಚ್.ಗೋವಿಂದಯ್ಯ, ಪದಾಧಿಕಾರಿಗಳಾದ ಟಿ.ಡಿ.ಜಗನ್ನಾಥ್, ರಮೇಶ್ ಮದರಿ, ಬಿ.ಕೆ.ಹನುಮಂತಪ್ಪ, ಆರ್.ಲಕ್ಷ್ಮಯ್ಯ, ಜಿ.ಬಿ.ಪಂಚಾಕ್ಷರಯ್ಯ, ದಯಾನಂದ, ರಾಮಚಂದ್ರಪ್ಪ, ಗುರುಮೂರ್ತಿ, ಸೈಯದ್ ಸಿರಾಜುದ್ದೀನ್, ತಿಪ್ಪೇಸ್ವಾಮಿ, ಎಚ್.ಸುಗೇಂದ್ರ ಇತರರಿದ್ದರು.