ರಾಜ್ಯ ಸರ್ಕಾರ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

ರಾಜ್ಯ ಸರ್ಕಾರ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ
Published on

ಹಾಸನ: ರಾಜ್ಯ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಪಕ್ಷದಿಂದ ಶುಕ್ರವಾರ ನಗರದ ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ನೇತೃತ್ವದಲ್ಲಿ ನಗರದ ಎನ್.ಆರ್.ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ನಂತರ ಕೆಲಹೊತ್ತು ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುಧ್ಧ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಈ ವೇಳೆ ಮಾತನಾಡಿದ ಸಿದ್ದೇಶ್ ನಾಗೇಂದ್ರ, ಕಾಂಗ್ರೆಸ್ ಪಕ್ಷ ದಲಿತರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಪರಿಶಿಷ್ಟರ ಅಭಿವೃದ್ಧಿ, ಕಲ್ಯಾಣಕ್ಕೆ ಮೀಸಲಿಟ್ಟಿದ್ದ 11.145 ಕೋಟಿ ಹಣವೇ ಇವರ ಬಿಟ್ಟಿ ಭಾಗ್ಯಕ್ಕೆ ಬಳಸಿಕೊಂಡಿದ್ದಾರೆ, ಅಧಿಕಾರ ಹಿಡಿಯಲಷ್ಟೇ ಬಿಟ್ಟಿ ಭಾಗ್ಯ ಮಾಡಿಕೊಂಡರು. ಬದಲಾಗಿ ಯಾವುದೇ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಅಲ್ಲ ಎಂದು ಕಿಡಿಕಾರಿದರು.
ಗ್ಯಾರಂಟಿ ಕಾರಣದಿಂದಲೇ ನೌಕರರಿಗೆ ಸಂಬಳ ಕೊಡುತ್ತಿಲ್ಲ. ಭಾಗ್ಯಗಳೂ ಸರಿಯಾಗಿ ಅರ್ಹರಿಗೆ ಮುಟ್ಟುತ್ತಿಲ್ಲ ಎಂದು ಆರೋಪಿಸಿದರು. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡುತ್ತಿರುವುದು ಕೇಂದ್ರ ಸರ್ಕಾರ, ಆದರೂ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಿಟ್ಟು ಹೊರ ಹಾಕಿದರು. ಕಾಡಾನೆ ದಾಳಿಯಿಂದ ಮಲೆನಾಡಿನಲ್ಲಿ ರೈತರು, ಅಮಾಯಕರು ಸತ್ತರೆ ಪರಿಹಾರ ಕೊಡಲು ಮೀನಾಮೇಶ ಎಣಿಸಿರುವ ಇವರು, ನೆರೆಯ ಕೇರಳಕ್ಕೆ ಹಿಂದು ಮುಂದು ನೋಡದೆ 15 ಲಕ್ಷ ರೂ. ಪರಿಹಾರ ನೀಡುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪರ್ವತಯ್ಯ ಮಾತನಾಡಿ, ಸಿದ್ದರಾಮಯ್ಯ ದಲಿತ ವಿರೋಧಿ, ಸಂವಿಧಾನ ವಿರೋಧಿ ಎಂದು ಆರೋಪಿಸಿದರು. ಈ ಮೂಲಕ ಸಮುದಾಯವನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.
ನಂತರ ಎನ್.ಆರ್.ವೃತ್ತದಿಂದ ಮೆರವಣಿಗೆ ಹೊರಟು, ಡಿಸಿ ಕಚೇರಿ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲಹೊತ್ತು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ನವರು ದಲಿತರ ಬಗ್ಗೆ ಡೋಂಗಿಯಾಗಿ ನಡೆದುಕೊಳ್ಳುತ್ತಿದ್ದಾರೆ. ದಲಿತರ ಹಿತ ರಕ್ಷಣೆ ಮಾಡಬೇಕಿದ್ದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಈ ಅನ್ಯಾಯದ ವಿರುದ್ಧ ಸೊಲ್ಲೆತ್ತದೆ ಪಕ್ಷದೊಂದಿಗೆ ಸಮುದಾಯದ ಹಿತವನ್ನೂ ಬಲಿಕೊಡುತ್ತಿದ್ದಾರೆ ಎಂದು ಆಪಾದಿಸಿದರು.ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಹಣ ವೆಚ್ಚ ಮಾಡಲು ಯಾವ ಗ್ಯಾರಂಟಿಯೂ ಅಡ್ಡ ಬಂದಿಲ್ಲ. ಇವರಿಗೆ ದಲಿತರ ಹಿತಾಸಕ್ತಿಗಿಂತ ಓಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಗಿದೆ ಎಂದು ವಿಷಾದಿಸಿದರು.
ಮೊರಾರ್ಜಿ ಶಾಲೆ ಅಭಿವೃದ್ಧಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಮೀಸಲಾದ ಹಣವನ್ನು ಇತರೆ ಯೋಜನೆಗೆ ಬಳಕೆ ಮಾಡಿರುವುದು ಖಂಡನೀಯ. ಈ ಮೂಲಕ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣ ಕೂಡ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ಅಮಿತ್ ಶೆಟ್ಟಿ, ರತ್ನ ಪ್ರಕಾಶ್, ಚಂದ್ರು, ರಾಮೇಗೌಡ, ಚನ್ನಕೇಶವ ಸೇರಿದಂತೆ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net