

ಗೋಣಿಕೊಪ್ಪ: ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ 13 ವಿದ್ಯಾರ್ಥಿಗಳನ್ನು ಕಾವೇರಿ ಕಾಲೇಜು ಕ್ರೀಡಾ ದಿನಾಚರಣೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಎಂ.ಅಜಯ್, ಬಿ.ಸಿ.ಮನೀಷ್, ಜ್ಯೋತಿಕಾ ಪೂಜಾರಿ, ಕೊಂಗಂಡ ಬೋಪಣ್ಣ, ಪೊನ್ನಕಚ್ಚೀರ ಬೋಪಣ್ಣ, ಕೇಳಪಂಡ ನಾಣಯ್ಯ, ಪಾಂಡಂಡ ಕಾರ್ಲ್ ಕಾರ್ಯಪ್ಪ, ಮೇಚಂಡ ನಾಣಯ್ಯ, ಟಿ.ಆರ್.ಜೋಶಿತ್, ಕುಪ್ಪಂಡ ಜಗತ್ ಬೆಳ್ಯಪ್ಪ, ಪಿ. ಎಂ.ನವೀನ್, ಎಂ.ಕೆ.ಹೇಮಂತ್, ಮುಕ್ಕಾಟೀರ ಎಂ.ಕುಶಾಲಪ್ಪ ಸನ್ಮಾನ ಸ್ವೀಕರಿಸಿದರು.
ಅಂತಾರಾಷ್ಟ್ರೀಯ ಹಾಕಿ ಆಟಗಾರ ಕ.ಬಾಳೆಯಡ ಕೆ.ಸುಬ್ರಮಣಿ ಬಹುಮಾನ ವಿತರಿಸಿ ಮಾತನಾಡಿ, ಸೇನೆಗೆ ಸೇರಲು ವಿದ್ಯಾರ್ಥಿಗಳು ಉತ್ಸಾಹ ತೋರಬೇಕು. ಪೂರಕ ಸಿದ್ಧತೆ ಮಾಡಿಕೊಳ್ಳುವುದರಿಂದ ಅನುಕೂಲವಾಗುತ್ತದೆ. ಕ್ರೀಡೆ, ಎನ್‌ಸಿಸಿಯಲ್ಲಿ ತೊಡಗಿಕೊಳ್ಳುವುದರಿಂದ ಸೈನ್ಯ ಸೇರುವ ಕನಸು ನನಸಾಗಲು ಅವಕಾಶ ದೊರೆಯುತ್ತದೆ ಎಂದರು.
ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸಾಧನೆ, ವೃತ್ತಿ ಪಡೆದುಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಆದರೂ ನಿರ್ಲಕ್ಷ್ಯದಿಂದ ಸಾಧಕರಾಗಿ ಹೊರಹೊಮ್ಮುತ್ತಿರುವವರ ಸಂಖ್ಯೆ ಕಡಿಮೆ ಇದೆ. ಹೆಚ್ಚು ಪರಿಶ್ರಮ ಅಗತ್ಯ ಎಂದರು.