ರಾಜ್ಯ ಮಟ್ಟದ ಸಂಕಲ್ಪ ಸ್ಪರ್ಧೆ 20ರಿಂದ

17 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ 75ನೇ ಜನ್ಮದಿನದ ನೆನಪಿಗೆ ನಗರದ ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಸಂಸ್ಥೆ ವತಿಯಿಂದ ಜೂ. 20, 21ರಂದು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸನ್ನಿಧಿ ಕಲಾ ಕ್ಷೇತ್ರದಲ್ಲಿ ರಾಜ್ಯಮಟ್ಟದ ಸಂಕಲ್ಪ-2023 ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 20ರಂದು ಬೆಳಗ್ಗೆ 10 ಗಂಟೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡುವರು. ಸಂಗೀತಗಾರ ವಾಸುಕಿ ವೈಭವ ಅತಿಥಿಯಾಗಿ ಆಗಮಿಸುವರು ಎಂದರು.
ಉತ್ಸವದಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ರಸಪ್ರಶ್ನೆ, ಹಿರಣ್ಯನಿಧಿ, ವಿಡಿಯೊ ಹಾಗೂ ಛಾಯಾಚಿತ್ರ ಎಡಿಟಿಂಗ್, ಜಾಹೀರಾತು ಹಾಗೂ ನೃತ್ಯ ಸೇರಿ 5 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಸ್ಪರ್ಧೆಯಲ್ಲಿ ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ನೃತ್ಯದಲ್ಲಿ ಕನಿಷ್ಠ 8-10 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಇದೆ ಎಂದರು.
ಪ್ರತಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಇದಲ್ಲದೆ ಜನರಲ್ ಚಾಂಪಿಯನ್‌ಶಿಪ್‌ಗೆ 30 ಸಾವಿರ ರೂ. ನಗದು, ರನ್ನರ್ ಅಪ್‌ಗೆ 15 ಸಾವಿರ ರೂ. ನಗದು ಹಾಗೂ ತೃತೀಯ ಸ್ಥಾನಕ್ಕೆ 5 ಸಾವಿರ ರೂ. ನಗದು, ಟ್ರೋಫಿ, ಪ್ರಮಾಣಪತ್ರ ನೀಡಲಾಗುವುದು ಎಂದರು.
ಈಗಾಗಲೇ ಬೆಂಗಳೂರು, ಕೊಪ್ಪಳ, ರಾಯಚೂರು, ಗುಲ್ಬರ್ಗಾ, ಬೀದರ, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಇನ್ನೂ ನೋಂದಣಿಗೆ ಅವಕಾಶ ಇದ್ದು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಮಹಾವೀರ ಉಪಾಧ್ಯೆ, ಡಾ. ಸೂರಜ್ ಜೈನ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net