ರಾಜ್ಯ ಬಜೆಟ್‌ನಲ್ಲಿ ರೈತರ ಹಕ್ಕೊತ್ತಾಯ ಈಡೇರಿಸಿ

honnur prakash
Published on

ಚಾಮರಾಜನಗರ: ರಾಜ್ಯ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ರೈತರ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂದು ಸಾಮೂಹಿಕ ನಾಯಕತ್ವ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಆಗ್ರಹಿಸಿದರು.

ರೈತರ ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧ ಖಾತರಿ ಕಾನೂನು ಜಾರಿ ಮಾಡಬೇಕು. ಕೃಷಿ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು. ರೈತರ ಪ್ರಕೃತಿ ವಿಕೋಪ ಬೆಳೆ ನಷ್ಟಕ್ಕೆ ವಿಮೆ ಪರಿಹಾರ ಸಿಗಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ರೈತರ ಭೂಮಿ ಮೌಲ್ಯಕ್ಕೆ ಶೇ. 75 ರಷ್ಟು ಸಾಲ ಸಿಗುವಂತೆ ಆಗಬೇಕು. ಕನಿಷ್ಠ 5 ಲಕ್ಷ ರೂ, ಕೃಷಿ ಆಧಾರ ರಹಿತ ಸಾಲ ಮಿತಿ ರದ್ದುಗೊಳಿಸಬೇಕು. ಬೆಂಕಿ ಬಿದ್ದು ಸುಟ್ಟ ಕಬ್ಬಿಗೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೆ.25 ರಷ್ಟು ಕಟಾವು ಮಾಡುವುದನ್ನು ತಪ್ಪಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೃಷಿಗೆ ಬಳಸುವ ಕೀಟನಾಶಕ, ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು, ಟ್ಯಾಕ್ಟರ್ ಬಿಡಿಭಾಗಗಳ ಜಿಎಸ್‌ಟಿ ತೆರಿಗೆ ರದ್ದುಗೊಳಿಸಬೇಕು. ಟ್ರ್ಯಾಕ್ಟರ್ ಕೃಷಿ ಯಂತ್ರಗಳ ಮಾರಾಟ ಕೇಂದ್ರಗಳಲ್ಲಿ ಸರ್ಕಾರ ನಿಗದಿ ಮಾಡಿದ ದರವನ್ನು ಎಲ್ಲಾ ಮಾರಾಟ ಕೇಂದ್ರಗಳಲ್ಲಿ ಬಹಿರಂಗವಾಗಿ ಪ್ರಕಟಿಸಬೇಕು ಎಂದರು.

ಮಹಿಳಾ ಸ್ವಸಹಾಯ ಸಂಘಗಳಿಗೆ ಮೈಕ್ರೋ ಫೈನಾನ್ಸ್‌ಗಳು ನೀಡುವ ಸಾಲ ವಸೂಲಾತಿ ಕಿರುಕುಳ ನಿಲ್ಲಿಸಲು ಕಠಿಣ ಕಾನೂನು ಜಾರಿ ಮಾಡಬೇಕು. ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿರುವ 32 ಲಕ್ಷ ರೈತರಿಗೆ ಸುಲಭವಾಗಿ ಸಾಗುವಳಿ ಪತ್ರ ನೀಡಬೇಕು. ಒಂದು ವರ್ಷದಿಂದ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹಾಲಿನ 5 ರೂ, ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಜಿಲ್ಲಾ ಕಾರ್ಯದರ್ಶಿ ಎಚ್.ಮೂಕಳ್ಳಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಹೆಗ್ಗೋಠಾರ ಶಿವಸ್ವಾಮಿ, ತಾಲೂಕು ಕಾರ್ಯದರ್ಶಿ ಸುಂದ್ರಪ್ಪ, ಯರಿಯೂರು ಮಹೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net