

ಆನೇಕಲ್: ಕೇರಳದಿಂದ ಅತ್ತಿಬೆಲೆ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ವರದಿ ಹೊಂದಿರಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹೇಳಿದರು.
ಅತ್ತಿಬೆಲೆ ಚೆಕ್ ಪೋಸ್ಟ್‌ಗೆ ಸೋಮವಾರ ಭೇಟಿ ನೀಡಿ, ವಾಹನಗಳಲ್ಲಿನ ಪ್ರಯಾಣಿಕರ ಬಳಿ ದಾಖಲೆ ಪರಿಶೀಲನೆ ನಡೆಸಿ ಮಾತನಾಡಿದರು.
ಕೇರಳ ಹಾಗೂ ಅಕ್ಕಪಕ್ಕದ ರಾಜ್ಯಗಳ ವಾಹನಗಳಲ್ಲಿ ಬರುವಂಥವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ವರದಿ ಕಡ್ಡಾಯ. ಅತ್ತಿಬೆಲೆ ಗಡಿಯಲ್ಲಿ ಕೇರಳ ಭಾಗದಿಂದ ಹೆಚ್ಚು ವಾಹನಗಳು ಆಗಮಿಸುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕೇರಳ ಹಾಗೂ ಕೆಲವು ರಾಜ್ಯಗಳಲ್ಲಿ ಕರೊನಾ ಪ್ರಕರಣ ಹೆಚ್ಚಿದ್ದರೂ ಬೆಂಗಳೂರು ನಗರದಲ್ಲಿ ಸೋಂಕು ಕಡಿಮೆ ಇದೆ. ವ್ಯಾಪಾರ-ವಹಿವಾಟು ಎಂದಿನಂತೆ ನಡೆಯುತ್ತಿದೆ. ಕರೊನಾ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದರು.
ಪಿಓಪಿ ಗಣೇಶ ಬೇಡ: ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಿದೆ. ತಜ್ಞರ ಸಮಿತಿಯಿಂದ ಮಾರ್ಗಸೂಚಿ ನೀಡಲಾಗಿದೆ. ವಾರ್ಡಿಗೆ ಒಂದರಂತೆ ಗಣೇಶ ಕೂರಿಸಬಹುದು. ಅದ್ದೂರಿ ಆಚರಣೆಗೆ ಅನುಮತಿ ಕೊಡುವುದಿಲ್ಲ. ಪಿಒಪಿ ಗಣೇಶ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಬೆಂಗಳೂರು ನಗರ ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಿ, ಕೆರೆ ಶುಚಿ ಮಾಡಲಾಗುತ್ತಿದ್ದು, ರಾಸಾಯನಿಕ ಮಿಶ್ರಿತ ಗಣಪನನ್ನು ವಿಸರ್ಜಿಸಿದರೆ ಪುನಃ ಕಲುಷಿತವಾಗುತ್ತದೆ. ಆದ್ದರಿಂದ ಕೆಮಿಕಲ್ ಮಿಶ್ರಿತ ಬಣ್ಣದ ಗಣಪ ಮಾರಾಟ ಮಾಡುವುದು ಕಂಡುಬಂದರೆ ಅಧಿಕಾರಿಗಳಿಗೆ ದೂರು ನೀಡಿ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ತಹಸೀಲ್ದಾರ್ ದಿನೇಶ್ ಮಾತನಾಡಿ, ಕರೊನಾ ಮೊದಲನೇ ಅಲೆ ಪ್ರಾರಂಭವಾದ ದಿನದಿಂದಲೂ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ಹಗಲಿರುಳು ತಪಾಸಣೆ ಮಾಡುತ್ತಿದ್ದಾರೆ. ಕೋವಿಡ್ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಅವರಿಗೆ ಟೆಸ್ಟ್ ಮಾಡುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗಿದೆ. ಎಲ್ಲರೂ ಸಹಕರಿಸಬೇಕು ಎಂದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಆನೇಕಲ್ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ತಿಮ್ಮರಾಜು ಹಾಗೂ ಸಂಗಡಿಗರು ಪುಸ್ತಕ ನೀಡಿ ಗೌರವಿಸಿದರು.
ಅತ್ತಿಬೆಲೆ ಪೊಲೀಸ್ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ. ವಿನಯ್ ಕುಮಾರ್, ವೈದ್ಯ ಲೋಕೇಶ್, ಬಿಜೆಪಿ ಮುಖಂಡರಾದ ಜಯಪ್ರಕಾಶ್ ರೆಡ್ಡಿ ಹಾಜರಿದ್ದರು.