

ಮೈಸೂರು: ಕಬ್ಬಿನ ಬೆಂಬಲ ಬೆಲೆ ಮರು ಪರಿಶೀಲಿಸಬೇಕು, ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಮೂರನೇ ದಿನ ಪೂರೈಸಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಕೆ ಮಾಡಬೇಕು ಎಂದು ಪೊರಕೆ ಹಿಡಿದು ಸರ್ಕಾರವನ್ನು ಒತ್ತಾಯಿಸಿದರು.
ಪಂಜಾಬ್‌ನಲ್ಲಿ ಕಡಿಮೆ ಇಳುವರಿ ಬರುವ ಕಬ್ಬಿಗೆ 3800 ರೂ. ನಿಗದಿ ಮಾಡಲಾಗಿದೆ. ಉತ್ತರಪ್ರದೇಶದಲ್ಲಿ 3500 ರೂ., ಗುಜರಾತ್‌ನಲ್ಲಿ 4,400 ರೂ. ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ಕೇವಲ 3,050 ರೂ. ಎಫ್‌ಆರ್‌ಪಿ ಮಾತ್ರ ಕೊಡಲು ಆದೇಶಿಸಲಾಗಿದೆ. ಇನ್ನೊಂದು ಕಡೆ ಶೇ.10 ಪರ್ಸೆಂಟ್ ಇದ್ದ ಇಳುವರಿಯನ್ನು ಶೇ.10.25ಕ್ಕೆ ಏರಿಕೆ ಮಾಡಿ ರೈತರಿಗೆ ದ್ರೋಹ ಬಗೆದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಬೆಳೆಗಾರರಿದ್ದಾರೆ. ಇವರ ರಕ್ಷಣೆ ಮಾಡದೆ ಸಂಸದರು, ಶಾಸಕರು, ಸಚಿವರು ಮರಳು ದಂಧೆ, ಭೂ ಮಾಫಿಯಾ, ಶಿಕ್ಷಣ ಸಂಸ್ಥೆಗಳ ಮಾಲೀಕರು, ಮದ್ಯ ಮಾರಾಟಗಾರರು, ಉದ್ಯಮಿಗಳು ಸಕ್ಕರೆ ಕಾರ್ಖಾನೆಗಳ ಮಾಲೀಕರು ಪರವಾಗಿ ಮಾತನಾಡಿ, ಅವರ ಬೆನ್ನಿಗೆ ನಿಲ್ಲುತ್ತಾರೆ. ದೇಶಕ್ಕೆ ಅನ್ನ ನೀಡುವ ರೈತನ ರಕ್ಷಣೆಗೆ ಬಾರದೆ ಚುನಾಯಿತ ಪ್ರತಿನಿಧಿಗಳು ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದರು.
ಮೈಸೂರು-ಚಾಮರಾಜನಗರ ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ರೈತರ ಪರ ಕೆಲಸ ಮಾಡದೆ ಕೇವಲ ಪ್ರಚಾರಕ್ಕಾಗಿ ಮತ್ತು ಸಕ್ಕರೆ ಕಾರ್ಖಾನೆಗಳ ಪರ ನಿಂತಿದ್ದಾರೆ. ಮೂರು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸ್ಥಳಕ್ಕೆ ಆಗಮಿಸಿ ಮನವಿ ಕೇಳಿಲ್ಲ. ರೈತರ ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ಜಿಲ್ಲಾ ಮಂತ್ರಿಗೆ ಕಪ್ಪುಬಾವುಟ ಪ್ರದರ್ಶನ ಮಾಡುವುದಲ್ಲದೆ ಜಿಲ್ಲಾಡಳಿತದ ವಿರುದ್ಧ ನಿರಂತರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ನಂದಿಗುಂದಪುರ ಪಿ. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮುಖಂಡ ರಾದ ಚುಂಚರಾಯನಹುಂಡಿ ಮಂಜು, ಬಸವರಾಜ, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಹಾಲಿನ ನಾಗರಾಜ್, ಹಾಡ್ಯ ರವಿ, ಕೆರೆಹುಂಡಿ ರಾಜಣ್ಣ, ಕುರುಬೂರು ಸಿದ್ದೇಶ್, ನಂಜುಂಡಸ್ವಾಮಿ, ಪ್ರದೀಪ್ ಕುರುಬೂರು, ಯಗ್ಗೊಟಾರ ಶಿವಸ್ವಾಮಿ, ಅಂಬಳೆ ಮಹದೇವಸ್ವಾಮಿ, ಮಂಜುನಾಥ್, ದೇವನೂರು ವಿಜಯೇಂದ್ರ, ಮಲಿಯೂರು ಪ್ರವೀಣ, ಹರ್ಷ ಇತರರು ಇದ್ದರು.