ರಾಜ್ಯ ಅಬಕಾರಿ ಇಲಾಖೆಯ ನಿದ್ದೆಗೆಡಿಸಿದ ಆಂಧ್ರ

liquor bottles
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಆಂಧ್ರಪ್ರದೇಶ ಸರ್ಕಾರ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಸಮೀಕ್ಷೆ ನಡೆಸುತ್ತಿದೆ ಹಾಗೂ ಅಕ್ಟೋಬರ್‌ನಲ್ಲಿ ದರ ಪರಿಷ್ಕರಿಸಲಿದೆ ಎಂಬ ಮಾತು ಕೇಳಿ ಬಂದಿದ್ದು, ಇದು ರಾಜ್ಯ ಅಬಕಾರಿ ಇಲಾಖೆಯ ನಿದ್ದೆಗೆಡಿಸಿದೆ.
ಸಮೀಕ್ಷೆ ಪೂರ್ಣಗೊಂಡು, ಮದ್ಯದರವನ್ನು ಪರಿಷ್ಕರಿಸಿ ವಿಶೇಷವಾಗಿ ಕರ್ನಾಟಕ-ಆಂಧ್ರದ ಗಡಿಭಾಗದಲ್ಲಿ ಹೊಸ ಅಂಗಡಿಗಳಿಗೆ ಪರವಾನಗಿ ಕೊಟ್ಟರೆ, ಕರ್ನಾಟಕದ ಅಬಕಾರಿ ಬೊಕ್ಕಸಕ್ಕೆ ಹೊಡೆತ ಬೀಳುವುದು ಖಚಿತ. ಇದರಿಂದ 2024-25ನೇ ಸಾಲಿನ ಆದಾಯ ಗುರಿ 38525 ಕೋಟಿ ರೂ. ಗುರಿ ತಲುಪುವುದು ಕಷ್ಟ ಸಾಧ್ಯವೆನ್ನಲಾಗಿದೆ.
ಅನ್ಯರಾಜ್ಯಗಳ ಹಾಗೂ ರಾಜ್ಯದ ಮದ್ಯ ದರ ವ್ಯತ್ಯಾಸ ಸರಿಪಡಿಸಲು ಕರ್ನಾಟಕ ಸರ್ಕಾರ ಮುಂದಾಗಿದ್ದರೂ ಅಂತಿಮ ಆದೇಶವಾಗ ಬೇಕಿದೆ. ದರ ಪರಿಷ್ಕರಣೆ ವ್ಯತ್ಯಾಸ ಒಂದೆಡೆಯಾದರೆ, ಮತ್ತೊಂದೆಡೆ ಐಎಂಎಲ್ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ. ಹೆಚ್ಚಿನ ಆದಾಯ ತಂದುಕೊಡುವ ಮದ್ಯ(ಐಎಂಎಲ್) ಮಾರಾಟ ಕುಸಿದಿದ್ದರೆ, ಬಿಯರ್ ಮಾರಾಟದಲ್ಲಿ ಏರಿಕೆಯಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಆದಾಯದ ಕುಸಿತ ಗ್ಯಾರಂಟಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಳೆದ ವಿಧಾನಸಭೆ ಚುನಾವಣೆಗಳ ಮುನ್ನ ವಿಶೇಷವಾಗಿ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಮದ್ಯ ಮಾರಾಟ ದರದಲ್ಲಿದ್ದ ವ್ಯತ್ಯಾಸ ಗಳಿಂದಾಗಿ ಗಡಿಜಿಲ್ಲೆಗಳ ಮೂಲಕ ಕರ್ನಾಟಕದಿಂದ ಆಂಧ್ರಕ್ಕೆ ಸಾಗಾಟ ಹೆಚ್ಚಿತ್ತು. ಇದರಿಂದ ನಮ್ಮ ರಾಜ್ಯದ ಮದ್ಯ ಮಾರಾಟದಲ್ಲಿ ಏರಿಕೆ ದಾಖಲಾಗಿತ್ತು. ಆದರೆ ಈಗ ಅಲ್ಲಿಯ ಹೊಸ ಸರ್ಕಾರ ಕಾನೂನು ಬಿಗಿ ಮಾಡಿದ್ದು, ಕರ್ನಾಟಕದಿಂದ ಅಕ್ರಮವಾಗಿ ಹೋಗುತ್ತಿದ್ದ ಮದ್ಯ ಪ್ರಮಾಣ ಕುಸಿದಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಅಂದಾಜು 12614 ಸನ್ನದುಗಳಿವೆ. 18 ಸ್ಲಾೃಬ್‌ಗಳ ಬದಲಿಗೆ 16 ಸ್ಲಾೃಬ್‌ಗಳೊಂದಿಗೆ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಯಾವುದು, ಎಷ್ಟು ಮಾರಾಟ ?
ಐಎಂಎಲ್-
ಏಪ್ರಿಲ್ -ಜುಲೈ 2023 -ಏಪ್ರಿಲ್ -ಜುಲೈ 2024
243.23 ಲಕ್ಷ ಪೆಟ್ಟಿಗೆ- 236.03 ಲಕ್ಷ ಪೆಟ್ಟಿಗೆ
ಜುಲೈ 2023 - ಜುಲೈ 2024
66.22 ಲಕ್ಷ ಪೆಟ್ಟಿಗೆ - 56.40 ಲಕ್ಷ ಪೆಟ್ಟಿಗೆ

ಬಿಯರ್
ಏಪ್ರಿಲ್ -ಜುಲೈ 2023 -ಏಪ್ರಿಲ್ -ಜುಲೈ 2024
148.27 ಲಕ್ಷ ಪೆಟ್ಟಿಗೆ- 173.55 ಲಕ್ಷ ಪೆಟ್ಟಿಗೆ
ಜುಲೈ 2023 - ಜುಲೈ 2024
29.81 ಲಕ್ಷ ಪೆಟ್ಟಿಗೆ - 36.06 ಲಕ್ಷ ಪೆಟ್ಟಿಗೆ

*ಕೋಟ್.
ಕರ್ನಾಟಕದಲ್ಲಿ ಪ್ರಸಕ್ತ ಸಾಲಿನ ಜುಲೈನಲ್ಲಿ ಐಎಂಎಲ್ ಮದ್ಯ ಮಾರಾಟದಲ್ಲಿ ಕುಸಿತವಾಗಿದೆ. ಆದರೆ ಬಿಯರ್ ಮಾರಾಟ ಹೆಚ್ಚಾಗಿದೆ. ಐಎಂಎಲ್ ಮದ್ಯ ಮಾರಾಟ ಹೆಚ್ಚಿದರೆ ತೆರಿಗೆ ಸಂಗ್ರಹದಲ್ಲೂ ಏರಿಕೆಯಾಗುತ್ತದೆ.
ಡಾ.ಬಿ.ಮಾದೇಶ, ಡಿಸಿ, ಅಬಕಾರಿ ಇಲಾಖೆ, ಚಿತ್ರದುರ್ಗ

ಮದ್ಯದಂಗಡಿ ಸಾಂಕೇತಿಕ ಚಿತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net