

ಮೈಸೂರು: ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಈ ಶತಮಾನದ ಮಹಾತ್ಮರು ಎಂದು ಕುದೇರು ಮಠದ ಕಿರಿಯ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ ಹೇಳಿದರು
ಜೆ.ಪಿ.ನಗರದ ಜೆಎಸ್‌ಎಸ್ ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಅಕ್ಷರ ದಾಸೋಹ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನಸ್ಸು, ಮಾತು ಮತ್ತು ಕೃತಿ ಎಲ್ಲವೂ ಏಕವಾಗಿರಬೇಕು. ತಾಯಿಯ ಅಂತಃಕರಣ ಹೊಂದಿದ್ದ ಶ್ರೀಗಳು ಜನರ ಮನದ ಕೊಳೆಯನ್ನು ಸ್ವಚ್ಛಗೊಳಿಸುವ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಿದರು ಎಂದರು.
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂದರ್ಶಕ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಮಾತನಾಡಿ, ರಾಜೇಂದ್ರ ಶ್ರೀಗಳು ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಮಕ್ಕಳ ಜ್ಞಾನದ ಹಸಿವನ್ನು ತಣಿಸಲು ಸಣ್ಣದಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಅದನ್ನು ಬೃಹತ್ ಸಂಸ್ಥೆಯಾಗಿ ಕಟ್ಟಿ ಬೆಳೆಸಿದರು. ಇಡೀ ಜೀವಮಾನವನ್ನು ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಮುಡಿಪಾಗಿಟ್ಟಿದ್ದರು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಶಿಕ್ಷಣ ಕ್ಷೇತ್ರವು ಸಮಾನತೆಯ ಕ್ಷೇತ್ರ, ಯಾವುದೇ ಭೇದ ಭಾವವಿಲ್ಲದ ವ್ಯಕ್ತಿತ್ವ ವಿಕಸನಕ್ಕೆ ಸದವಕಾಶ ನೀಡುವ ಕ್ಷೇತ್ರ. ಅಂತಹ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಕೀರ್ತಿ ರಾಜೇಂದ್ರ ಶ್ರೀಗಳಿಗೆ ಸಲ್ಲುತ್ತದೆ. ಸನ್ಮಾರ್ಗದಲ್ಲಿ ನಡೆದು ಆದರ್ಶ ವ್ಯಕ್ತಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಾಂಶುಪಾಲೆ ಎಚ್.ಟಿ. ನಿರ್ಮಲಾ, ಅಕ್ಷರ ದಾಸೋಹ ಕೇಂದ್ರದ ಮುಖ್ಯಸ್ಥ ಗೌರಿಶಂಕರಸ್ವಾಮಿ, ಮುಖ್ಯ ಶಿಕ್ಷಕ ಎಸ್.ಎಂ. ಸುರೇಶ್‌ಬಾಬು, ದೈಹಿಕ ಶಿಕ್ಷಣ ಶಿಕ್ಷಕ ಡಿ.ಎಂ. ಸಿದ್ದಲಿಂಗಸ್ವಾಮಿ ಇತರರು ಇದ್ದರು.