ರಾಜೇಂದ್ರ ಶ್ರೀಗಳಿಂದ ನಾಡಿಗೆ ಸಂಸ್ಕಾರಯುತ ಶಿಕ್ಷಣ

09rajesh2
Published on

ಚಾಮರಾಜನಗರ: ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪಾತ್ರ ಅಪಾರವಾಗಿದೆ ಎಂದು ಸಾಲೂರು ಮಠದ ಪೀಠಾಧ್ಯಕ್ಷ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 109ನೇ ಜಯಂತಿ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣ, ದತ್ತಿ ಕಾರ್ಯಕ್ರಮ ಹಾಗೂ ಸಾಧಕರಿಗೆ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಕಲಿತವರು ದಾರಿತಪ್ಪಬಹುದು, ಆದರೇ ಸಂಸ್ಕಾರವನ್ನು ಕಲಿತವರು ದಾರಿತಪ್ಪಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರಾಜೇಂದ್ರ ಶ್ರೀಗಳು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿಕೊಟ್ಟಿದ್ದಾರೆ. ರಾಜೇಂದ್ರ ಶ್ರೀಗಳ ದೂರದೃಷ್ಟಿ ಚಿಂತನೆ, ವ್ಯಕ್ತಿತ್ವ ಮತ್ತು ಆಲೋಚನೆಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಂಡು ಸಾಗಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಬಹುಪಾಲು ಕುಟುಂಬದವರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಲವನ್ನು ಪಡೆದುಕೊಂಡಿದ್ದಾರೆ. ಈ ಭಾಗದ ಹಲವಾರು ಮಠಗಳು ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ರಾಜೇಂದ್ರಶ್ರೀಗಳ ಆಶೀರ್ವಾದವಿದೆ. ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಕಾರ್ಯಗಳಿಗೆ ಸುತ್ತೂರು ಮಠದ ಕೊಡುಗೆ ಅಪಾರವಿದೆ. ರಾಜೇಂದ್ರ ಶ್ರೀಗಳ ಸಂಕಲ್ಪಕ್ಕೆ ಪೂರಕವಾಗಿ ನಾವೆಲ್ಲರೂ ನಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಮಾತನಾಡಿ, ನಾಡಿನ ಅನೇಕ ಮಠಗಳು ಜಾತಿ-ಮತ ಬೇಧವಿಲ್ಲದೇ ಸೇವೆ ಮಾಡುತ್ತಿವೆ. ಈ ನೆಲದ ಕಾನೂನು ದುರ್ಬಳಕೆ ಮಾಡಿಕೊಳ್ಳುವವರಿಗೆ ಅರಿವು ಮೂಡಿಸುವ ಕೆಲಸವನ್ನು ಮಠಾಧೀಶರು ನಿರಂತರವಾಗಿ ಮಾಡುತ್ತಿದ್ದಾರೆ. ಪರಿಣಾಮವಾಗಿ ಸಮಾಜದಲ್ಲಿ ಸಾಮರಸ್ಯ ಇಂದಿಗೂ ಉಳಿದುಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದ ಅಧ್ಯಕ್ಷ ಶ್ರೀಚನ್ನಬಸವ ಸ್ವಾಮೀಜಿ, ಜೆಎಸ್‌ಎಸ್ ವಿಶ್ರಾಂತ ಪ್ರಾಂಶುಪಾಲ ಡಾ.ಎಂ.ನಂಜುಂಡಪ್ಪ, ದತ್ತಿ ದಾನಿಗಳಾದ ಬಿ.ಎಂ.ಪ್ರಭುಸ್ವಾಮಿ, ಪಿ.ವೃಷಭೇಂದ್ರಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್, ಕಾರ್ಯದರ್ಶಿ ನಾಗರಾಜು, ಬಿ.ಎಸ್.ವಿನಯ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಸಂತಮ್ಮ ಹಾಗೂ ಇತರರು ಹಾಜರಿದ್ದರು.

ಮೈಸೂರಿನ ಸುತ್ತೂರು ಪರಂಪರೆ ಹಾಗೂ ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಸೇವೆ ಜಗತ್ತಿಗೆ ಮಾದರಿಯಾಗಿದೆ ಎಂದು ಮೈಸೂರಿನ ವಾಗ್ಮಿಗಳಾದ ಡಿ.ಎಸ್.ಸದಾಶಿವಮೂರ್ತಿ ಹೇಳಿದರು. ರಾಜೇಂದ್ರ ಶ್ರೀಗಳ ಸಾಮಾಜಿಕ ಬದ್ಧತೆ, ಕಾಯಕ ನಿಷ್ಠೆ, ಅಂತಃಕರಣ, ಔದಾರ್ಯ, ಸೇವಾ ತತ್ಪರ್ಯಗಳ ಕುರಿತು ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜಿಲ್ಲೆಯ ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ಆಡಳಿತಾತ್ಮಕ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ರಾಜೇಂದ್ರ ಶ್ರೀಗಳು ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಸೇವಾ ಕಾರ್ಯ ಜಾತಿ, ಮತಗಳನ್ನು ಮೀರಿ ವಿಸ್ತಾರಗೊಂಡಿದೆ ಎಂದು ತಿಳಿಸಿದರು.

ಇತ್ತೀಚೆಗೆ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದುಕೊಂಡ ಸಾಲೂರು ಮಠದ ಡಾ.ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಚಾ.ನಗರ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಬೋಧಕವರ್ಗದ ವತಿಯಿಂದ ಶ್ರೀಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅತ್ಯುತ್ತಮ ರ‌್ಯಾಂಕ್ ಪಡೆದು ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳಾದ ಇಂಚರ ಮತ್ತು ಎಂ.ಪ್ರತೀಕ್ಷಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net