ಚಾಮರಾಜನಗರ : ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಮೈಸೂರು ಪಂಚಗವಿ ಮಠದ ಶ್ರೀಶ್ರೀಕಂಠಸ್ವಾಮಿ ತಿಳಿಸಿದರು.
ತಾಲೂಕಿನ ಕುದೇರು ಶಂಕರ ಮಠದ ಆವರಣದಲ್ಲಿ ವೀರಶೈವ ಯುವ ವೇದಿಕೆ, ವೀರಶೈವ ಭಕ್ತ ಮಂಡಳಿ ಮತ್ತು ಜೆಎಸ್‌ಎಸ್ ನೌಕರರ ವೃಂದ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಬೆಳೆದ ರಾಜೇಂದ್ರ ಶ್ರೀಗಳು ಶಿಕ್ಷಣ ಪಡೆಯಲು ಮೈಸೂರಿಗೆ ಬಂದ ಸಂದರ್ಭದಲ್ಲಿ ತಾವು ಮತ್ತು ಸ್ನೇಹಿತರು ವಸತಿ ಮತ್ತು ಊಟಕ್ಕೆ ಕಷ್ಟಪಡುತ್ತಿದ್ದರು. ಇದನ್ನು ಮನಗಂಡು ಚಿಂತನೆ ಮಾಡಿ ವಸತಿ ನಿಲಯವನ್ನು ತೆರೆಯಬೇಕೆಂದು ಯೋಚಿಸಿದರು. ತಮ್ಮಲ್ಲಿನ ಚಿನ್ನದ ಕರಡಿಗೆಯನ್ನು ಮಾರಾಟ ಮಾಡಿ ವಸತಿನಿಲಯವನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾದರು ಎಂದು ತಿಳಿಸಿದರು.
ವೀರಶೈವ ಲಿಂಗಾಯಿತ ಮಠಗಳು ದೇವಸ್ಥಾನ ಕಟ್ಟದೇ, ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡ ಮಕ್ಕಳಿಗೆ ನೆರವಾಗಿದೆ. ಈ ಭಾಗದ ಹೆಣ್ಣು ಮಕ್ಕಳು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ವಿದ್ಯಾವಂತರಾಗಿದ್ದಾರೆ ಎಂಬುದಕ್ಕೆ ರಾಜೇಂದ್ರ ಶ್ರೀಗಳು ಕಾರಣರಾಗಿದ್ದಾರೆ. ಅವರ ಸಮಾಜಮುಖಿ ಸೇವೆಗಳು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ವಿಭಾಗದ ನಿರ್ದೇಶಕ ಕೆ.ಎಲ್.ರೇವಣ್ಣಸ್ವಾಮಿ, ಚುಂಚನಹಳ್ಳಿ ಕಡಲಕಟ್ಟೆ ಮಠಾಧ್ಯಕ್ಷ ಶ್ರೀಚನ್ನಬಸವ ಸ್ವಾಮೀಜಿ, ಕುದೇರು ಶಂಕರ ಮಠದ ಅಧ್ಯಕ್ಷ ನಟರಾಜ ಸ್ವಾಮೀಜಿ, ಪಡುವಲ ಮಠದ ಅಧ್ಯಕ್ಷ ಪ್ರಭು ಸ್ವಾಮೀಜಿ, ಸಾಹಿತಿ ನಗರ್ಲೆ ಶಿವಕುಮಾರ್, ಜೆಎಸ್‌ಎಸ್ ಸಂಸ್ಥೆಯ ಕೆ.ಆರ್.ಕುಮಾರಸ್ವಾಮಿ, ನಾಗರಾಜಪ್ಪ, ಕೆ.ಎಸ್.ಪುಟ್ಟಣ್ಣ, ಜೆಎಸ್‌ಎಸ್ ಮೋಹನ್, ನಾಗಭೂಷಣ್, ರಾಜೇಂದ್ರ, ನಿವೃತ್ತ ಶಿಕ್ಷಕ ವೀರಭದ್ರಪ್ಪ, ದೇಮಹಳ್ಳಿ ಶಿವಕುಮಾರ್, ಮುಖಂಡರಾದ ಸುಭೋಜ, ಬಟ್ಟಪ್ಪ, ಉಪನ್ಯಾಸಕ ಭಾಸ್ಕರ್, ಮಂಜುನಾಥ್ ಹಾಗೂ ಇತರರು ಹಾಜರಿದ್ದರು.
ಅಡ್ಡಪಲ್ಲಕ್ಕಿ ಉತ್ಸವ
ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110 ನೇ ಜಯಂತ್ಯುತ್ಸವದ ಅಂಗವಾಗಿ ಶ್ರೀಗಳ ಭಾವಚಿತ್ರವನ್ನು ಅಡ್ಡ ಪಲ್ಲಕ್ಕಿಯಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕುದೇರು ಸುತ್ತಮುತ್ತಲಿನ ಗ್ರಾಮದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕಾರ್ಯಕ್ರಮದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.