

ಮೈಸೂರು: ಸಾಮಾಜಿಕ ಉನ್ನತಿಯೇ ಜೀವನ ಧ್ಯೇಯವೆಂದು ನಂಬಿದ್ದ ರಾಜೇಂದ್ರ ಶ್ರೀಗಳ ಆದರ್ಶವೇ ಯುವಪೀಳಿಗೆಗೆ ದಾರಿದೀಪವಾಗಿದೆ ಎಂದು ಮೈವಿವಿ ಬಸವೇಶ್ವರ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರಯ್ಯ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 107ನೇ ಜಯಂತಿ, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಉನ್ನತ ವಿದ್ಯಾಭ್ಯಾಸ ಕನಸೇ ಆಗಿದ್ದ ಕಾಲದಲ್ಲಿ ಶಾಲೆ, ಉಚಿತ ವಿದ್ಯಾರ್ಥಿನಿಲಯ ತೆರೆಯುವ ಮೂಲಕ ಶ್ರೀಗಳು ಶಿಕ್ಷಣ ಕ್ರಾಂತಿಯ ಹರಿಕಾರರಾದರು ಎಂದು ಸ್ಮರಿಸಿದರು.
ಶರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಮ.ಗ.ಸದಾನಂದಯ್ಯ ಮಾತನಾಡಿ, ಶ್ರದ್ಧೆ, ನಿಷ್ಠೆಯಿಂದ ಕೈಗೊಂಡ ಸೇವಾ ಕರ್ಮ ಅಪರಿಮಿತ ಸಾಧನೆಯ ಅಡಿಗಲ್ಲೆಂಬ ಉಕ್ತಿಗೆ ಶ್ರೀಗಳವರ ಕಾಯಕನಂಬಿಕೆಯೇ ನಿದರ್ಶನ ಎಂದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಜೆಎಸ್‌ಎಸ್ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ, ಮೈವಿವಿ ದೈಹಿಕ ಶಿಕ್ಷಣ, ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ವೆಂಕಟೇಶ್ ಇತರರು ಇದ್ದರು.