ರಾಜೇಂದ್ರ ಕೊಲೆ ಸಂಚು ತನಿಖಾ ತಂಡವೇ ಬದಲು!

Published on

ಮಾಗಡಿ ಡಿವೈಎಸ್ಪಿ ಹೆಗಲಿಗೆ ವಿಚಾರಣೆ ಹೊಣೆ 5ನೇ ಆರೋಪಿ ಯತೀಶ್​ ಬಂಧನ

ತುಮಕೂರು: ಸಹಕಾರ ಸಚಿವ ಕೆ.ಎನ್​.ರಾಜಣ್ಣ ಪುತ್ರ ವಿಧಾನಪರಿಷತ್​ ಸದಸ್ಯ ಆರ್​.ರಾಜೇಂದ್ರ ಅವರ ಕೊಲೆ ಸಂಚು ಪ್ರಕರಣದ ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡವನ್ನು ಬದಲಿಸಲಾಗಿದೆ. ಮಾಗಡಿ ಡಿವೈಎಸ್ಪಿ ಪ್ರವಿಣ್​ಗೆ ಪ್ರಕರಣದ ವಿಚಾರಣೆ ಜವಾಬ್ದಾರಿ ನೀಡಲಾಗಿದೆ.

ರಾಜಣ್ಣ ಕೊಲೆ ಸಂಚಿನ ಪ್ರಕರಣವನ್ನು ಮೊದಲಿಗೆ ಮಧುಗಿರಿ ಉಪವಿಭಾಗದ ಡಿವೈಎಸ್ಪಿ ಮಂಜುನಾಥ್​ ನೇತೃತ್ವದ ತನಿಖಾ ತಂಡಕ್ಕೆ ವಹಿಸಲಾಗಿತ್ತು. ಅವರ ಜತೆ ಶಿರಾ ಗ್ರಾಮಾಂತರ ಠಾಣೆ ಸಿಪಿಐ ರಾವೇಂದ್ರ, ಕ್ಯಾತಸಂದ್ರ ಪಿಎಸ್​ಐ ಚೇತನ್​ ಕುಮಾರ್​ ತಂಡದಲ್ಲಿದ್ದರು. ಇದೀಗ ಡಿವೈಎಸ್ಪಿ ಪ್ರವಿಣ್​ ಜತೆ ಡಿಸಿಆರ್​ಬಿ ಸಿಪಿಐ ವಿ.ಅವಿನಾಶ್​, ಕ್ಯಾತಸಂದ್ರ ಠಾಣೆ ಸಿಪಿಐ ರಾಮಪ್ರಸಾದ್​, ಶಿರಾ ಗ್ರಾಮಾಂತರ ಠಾಣೆ ರಾವೇಂದ್ರ ಹೊಸ ತಂಡದಲ್ಲಿ ತನಿಖಾ ತಂಡದ ಬದಲಾವಣೆಗೆ ಕಾರಣ ತಿಳಿದುಬಂದಿಲ್ಲ.

ಪುಷ್ಪಾಗಿದೆ ಕ್ರಿಮಿನಲ್​ ನಂಟು!: ಉಪ್ಪಾರಹಳ್ಳಿ ರಸ್ತೆ ಮೇಲ್ಸೇತುವೆ ಕೆಳೆಗೆ ಹೋಟೆಲ್​ ನಡೆಸುತ್ತಿದ್ದ ಪುಷ್ಪಾ ವಿರುದ್ಧ ಸಾಕಷ್ಟು ಕ್ರಿಮಿನಲ್​ ಪ್ರಕರಣಗಳು ದಾಖಲಾಗಿದ್ದು, ಈಕೆಯ ಅಪರಾಧ ಜಗತ್ತಿನ ನಂಟು ಇರುವುದು ಬಯಲಾಗುತ್ತಿದೆ. 2023ರಲ್ಲಿ ಸೋಮನ ಜತೆ ಸೇರಿ ಕೃಷ್ಣಾನಗರದ 63 ವರ್ಷದ ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ 53 ಗ್ರಾಂ ಆಭರಣ ದರೋಡೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದಳು. ಆರೋಪಿ ಪತ್ತೆಯಾಗದ ಕಾರಣದಿಂದಾಗಿ 35 ವರ್ಷದ ಮಹಿಳೆ ಎಂದು ಎಫ್​ ಐಆರ್​ ದಾಖಲು ಮಾಡಿಕೊಂಡಿದ್ದ ಹೊಸಬಡಾವಣೆ ಪೊಲೀಸರು ಪುಷ್ಪಾ ಅಲಿಯಾಸ್​ ಬೇಬಿ ಪೂಜಾ ಹಾಗೂ ಸೋಮನನ್ನು ಅರೆಸ್ಟ್​ ಮಾಡಿದ್ದರು.

ಸೋಮನ ಅಪರಾಧ ಚಟುವಟಿಕೆಗಳಲ್ಲಿ ಸಹಭಾಗಿಯಾಗಿದ್ದ ಪುಷ್ಪಾ ಈಗ ಆತನ ವಿರುದ್ಧವೇ ತಿರುಗಿ ಬಿದ್ದಿರುವುದು ಪೊಲೀಸರಿಗೂ ಅಚ್ಚರಿ ಮೂಡಿಸಿದೆ.

ಯತೀಶ್​ ವಶಕ್ಕೆ: ಈ ಮಧ್ಯೆ ಪ್ರಕರಣದ 5ನೇ ಆರೋಪಿಯಾಗಿರುವ ಯತೀಶ್​ ಎಂಬುವವನನ್ನು ಪೊಲೀಸರು ಮಂಗಳವಾರ ನಗರದ ಶಾಂತಿನಗರದಲ್ಲಿ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಎ1 ಆರೋಪಿ ಜಯಪುರ ಸೋಮನ ಶಿಷ್ಯ ಯತೀಶ, ಪ್ರಕರಣದಲ್ಲಿ 5 ಲಕ್ಷ ರೂ. ಮುಂಗಡವಾಗಿ ಪಡೆದಿದ್ದ ಎನ್ನಲಾಗಿದ್ದು, ಆತನನ್ನು ಮತ್ತು ಯಶೋದಾ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆಯೇ ಕೊಲೆ ಸುಪಾರಿ ವಿಚಾರ ಬಹಿರಂಗಪಡಿಸಿದ ಸೋಮನ ಸ್ನೇಹಿತೆ ಪುಷ್ಪಾ ಅವರನ್ನು ಪೊಲೀಸರು ಸತತ ಎರಡನೇ ದಿನವೂ ಠಾಣೆಗೆ ಕರಸಿ

ಕೊಂಡು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ತುಮಕೂರಿನ ಹಲವು ರಾಜಕೀಯ ಮುಖಂಡರ ಜತೆ ಸಲುಗೆಯಿಂದ ಇದ್ದು ನಗ್ನ ವೀಡಿಯೋ ಮಾಡಿಕೊಂಡಿರುವ ಪ್ರಕರಣಗಳ ಬಗ್ಗೆಯೂ ವಿಚಾರಣೆ ನಡೆಸಿರುವುದು ಕುತೂಹಲ ಮೂಡಿಸಿದೆ. ವಿಧಾನಸಭೆಯಲ್ಲಿ ಸಚಿವ ಕೆ.ಎನ್​.ರಾಜಣ್ಣ ಪ್ರಸ್ತಾಪಿಸಿರುವ ಹನಿಟ್ರಾ$್ಯಪ್​ ಪ್ರಕರಣದಲ್ಲಿಯೂ ತುಮಕೂರಿನ ನಂಟು ಇದೆ ಎಂಬ ಬಗ್ಗೆ ಈಗ ಗುಸುಗುಸು ಕೇಳಿಬಂದಿದೆ. ಪುಷ್ಪಾ ಹಾಗೂ ಸೋಮನ ನಡುವೆ ಹಣಕಾಸು ವಿಷಯದಲ್ಲಿ ವ್ಯತ್ಯಾಸ ಬಂದಿರುವ ಹಿನ್ನೆಲೆಯಲ್ಲಿ ಪುಷ್ಪಾ ಕೊಲೆ ಸಂಚು ಬಹಿರಂಗಪಡಿಸಿದ್ದಾಳೆ ಎನ್ನಲಾಗಿದ್ದು, ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಎ1 ಆರೋಪಿ ಸೋಮನ ಬ್ಯಾಂಕ್​ ಖಾತೆ ಫ್ರೀಜ್​ ಮಾಡಲಾಗಿದೆ. ಸೋಮನ ಸ್ನೇಹಿತ ಕಾರ್ಪೆಂಟರ್​ ಮನು ಬ್ಯಾಂಕ್​ ಖಾತೆಯನ್ನು ಪರಿಶೀಲಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net