ರಾಜೀವ್‌ಗಾಂಧಿ ನಗರ ಸ್ಲಂ ನಿವಾಸಿಗಳಿಗೆ ಮನೆ : ಶಾಸಕ ಎ.ಮಂಜುನಾಥ್ ಭರವಸೆ

3
Published on

ಮಾಗಡಿ: ಮುಂದಿನ ದಿನಗಳಲ್ಲಿ ರಾಜೀವ್ ಗಾಂಧಿನಗರ ಸ್ಲಂ ನಿವಾಸಿಗಳಿಗೆ 10 ಕೋಟಿ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡಿ, ಹಕ್ಕುಪತ್ರ ವಿತರಿಸುವುದಾಗಿ ಶಾಸಕ ಎ.ಮಂಜುನಾಥ್ ಭರವಸೆ ನೀಡಿದರು.

ಪಟ್ಟಣದ ರಾಜೀವ್‌ಗಾಂಧಿ ನಗರದ ಶ್ರೀ ಮಾರಮ್ಮ ದೇವಿಯ 25ನೇ ವಾರ್ಷಿಕೋತ್ಸವದಲ್ಲಿ ಶನಿವಾರ ಮಾತನಾಡಿ, ಸ್ಲಂ ಬೋರ್ಡ್‌ನಿಂದ ರಾಜೀವ್ ಗಾಂಧಿ ನಗರದ ಲಾನುಭವಿಗಳ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಎಚ್.ಎಂ.ರೇವಣ್ಣ ಶಾಸಕರಾದ ವೇಳೆ ಆಶ್ರಯ ನಿವೇಶನ ಕೊಟ್ಟಿದ್ದು ಬಿಟ್ಟರೆ ನಂತರ ಏನೂ ಮಾಡಲಿಲ್ಲ. ನಾನು ಶಾಸಕನಾದ ನಂತರ ರಸ್ತೆ, ಚರಂಡಿ ಮಾಡಿಸಿ ಮೂಲಭೂತ ಸೌಕರ್ಯ ಕಲ್ಪಿಸುತ್ತಿದ್ದೇನೆ. ಚುನಾವಣೆ ಬರಲಿ ಬಿಡಲಿ ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಷ್ಟೇ ನನ್ನ ಗುರಿ ಎಂದರು.

ಪುರಸಭೆ ಅಧ್ಯಕ್ಷೆ ಕೆ.ಆರ್.ವಿಜಯಲಕ್ಷ್ಮಿ, ಸದಸ್ಯರಾದ ಎಂ.ಎನ್.ಮಂಜುನಾಥ್, ಎಂ.ಆರ್.ರೇಖಾ ನವೀನ್, ಜಯರಾಮು, ಅನಿಲ್ ಕುಮಾರ್, ಹೇಮಲತಾ, ಅಶ್ವತ್ ಇತರರಿದ್ದರು.

ಮನೆ ಮನೆಗೂ ನೀರು: ಕಣ್ವ ಡಾಬಾ ಹತ್ತಿರ ಗಾರ್ಮೆಂಟ್ಸ್ ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ಈ ಭಾಗದ ಜನರಿಗೆ ತರಬೇತಿ ನೀಡಿ ನಂತರ ಉದ್ಯೋಗ ನೀಡಲಾಗುವುದು. ಈ ಹಿಂದೆ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಯಾದ ವೈ.ಜಿ. ಗುಡ್ಡ, ಮಂಚನಬೆಲೆ ಜಲಾಶಯಕ್ಕೆ ಹೇಮಾವತಿ ನೀರು ತುಂಬಿಸುವ ಕೆಲಸ ಶೀಘ್ರ ಸಾಕಾರಗೊಳ್ಳಲಿದೆ. ಇದರಿಂದ ಜಲಾಶಯಗಳ ವ್ಯಾಪ್ತಿಯ ಮನೆ ಮನೆಗೂ ತಲುಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಮಂಜುನಾಥ್ ಹೇಳಿದರು. ನಾಲ್ಕು ಪಥದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಭೂಸ್ವಾಧೀನದಲ್ಲಿ ಅನ್ಯಾಯವಾಗದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾಮಗಾರಿ ಪ್ರಗತಿಯಲ್ಲಿದ್ದು, ಕಲ್ಯಾಗೇಟ್‌ನ ವಿನಾಯಕ ದೇವಸ್ಥಾನ ಸ್ಥಳಾಂತರ ಮಾಡಿ ಪಟ್ಟಣದಲ್ಲಿ ಕಾಮಗಾರಿ ಆರಂಭಿಸುವಂತೆ ಕೆಶಿಪ್ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net