ರಾಜೀವ್‌ಗಾಂಧಿ ಆಡಳಿತ ಸ್ಮರಣೀಯ

CTD CONGRESSS
Published on

ಚಿತ್ರದುರ್ಗ: ರಾಜೀವ್‌ಗಾಂಧಿ ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ ಉತ್ತಮ ಜ್ಞಾನ, ಆಡಳಿತದ ಮೂಲಕ ದೇಶವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದರು ಎಂದು ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ಹೇಳಿದರು.
‘ಭಯೋತ್ಪಾದನೆ ತೊರೆಯಿರಿ’ ಘೋಷಣೆಯೊಂದಿಗೆ ಪೆರಂಬದೂರಿಂದ ಕ್ವಿಟ್ ಇಂಡಿಯಾ ಚಳವಳಿ- ಆ.9ರಂದು ಆರಂಭವಾಗಿರುವ ರಾಜೀವ್‌ಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆ ಚಿತ್ರದುರ್ಗ ನಗರಕ್ಕೆ ಭಾನುವಾರ ಆಗಮಿಸಿದ ಸಂದರ್ಭ ಸ್ವಾಗತಿಸಿ ಮಾತನಾಡಿ, ಈ ಯಾತ್ರೆ ಆ.19ರಂದು ಹೊಸದಿಲ್ಲಿ ತಲುಪಲಿದೆ ಎಂದರು.
ಈಗ ನಾನು ಬದುಕಿದ್ದೇನೆ ಎಂದರೆ ಅದಕ್ಕೆ ರಾಜೀವ್‌ಗಾಂಧಿ ಕಾರಣರಾಗಿದ್ದಾರೆ. ಅವರ ಹತ್ಯೆಯಾದ ದಿನದಂದು ನಾನು ಕೂಡ ಅವರೊಂದಿಗೆ ಇದ್ದೆ. ಆದರೆ, ಕಾರಣಾಂತರಗಳಿಂದ ಅಂದು ಅವರ ಸೂಚನೆಯಂತೆ ಬೇರೆಡೆ ನಾನು ಹೋಗಬೇಕಾಗಿದ್ದರಿಂದ ಇಂದಿಗೂ ಬದುಕಿದ್ದೇನೆ ಎಂದು ಭಾವುಕರಾಗಿ ಹಳೇ ನೆನಪುಗಳನ್ನು ಮೆಲುಕು ಹಾಕಿದರು.
ರಾಜೀವ್‌ಗಾಂಧಿ ಅಧಿಕಾರದಲ್ಲಿದ್ದಾಗ 18 ವರ್ಷ ವಯೋಮಿತಿ ತಲುಪಿದ ಯುವಜನರಿಗೆ ಮತದಾನದ ಹಕ್ಕು ನೀಡಿದರು. ಪಂ.ರಾಜ್ ವ್ಯವಸ್ಥೆ ಜಾರಿ ಮೂಲಕ ಆಡಳಿತವನ್ನು ವಿಕೇಂದ್ರೀಕರಣಗೊಳಿಸಿದರು. ಕಂಪ್ಯೂಟರ್, ಮೊಬೈಲ್ ಬಳಕೆ ಅವರ ಕಾಲದಲ್ಲಿ ಆರಂಭವಾಯಿತು ಎಂದರು.
ರಾಜೀವ್‌ಗಾಂಧಿಯ ಅವರಿಗೆ ರಾಜಕೀಯ ಕ್ಷೇತ್ರಕ್ಕೆ ಬರಲು ಆಸಕ್ತಿ ಇರಲಿಲ್ಲ. ಆದರೆ, ಅಂದಿನ ದೇಶದ ಪರಿಸ್ಥಿತಿ ಮತ್ತು ಹಿರಿಯರ ಒತ್ತಡದ ಕಾರಣಕ್ಕೆ ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿದ್ದರು. ಕಡಿಮೆ ಅಧಿಕಾರಾವಧಿಯಲ್ಲೂ ಉತ್ತಮ ಆಡಳಿತ ನೀಡಿದ ಅವರ ನಡೆ ಸ್ಮರಣೀಯವಾಗಿದೆ ಎಂದು ತಿಳಿಸಿದರು.
ಈ ಯಾತ್ರೆ ಭಯೋತ್ಪಾದನೆ ವಿರೋಧಿ ಸಂದೇಶ, ದೇಶದ ಏಕತೆ ಬಲವರ್ಧನೆ, ಸಹೋದರತ್ವದ ಸಂದೇಶ್ನ ಸಾರುತ್ತದೆ. ಭಯೋತ್ಪಾದನೆ ಚಟುವಟಿಕೆಗಳ ವಿರುದ್ಧ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು.
ಯಾತ್ರಾ ಸಮಿತಿ ಅಧ್ಯಕ್ಷ ಆರ್.ದೊರೈ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಶ್ರೀನಿವಾಸಪ್ಪ, ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಪ್ರಕಾಶ್ ಇತರರಿದ್ದರು. ಕಾರ‌್ಯಕ್ರಮಕ್ಕೂ ಮೊದಲು ಪಕ್ಷದ ಪ್ರಮುಖರು, ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net