ರಾಜೀವ್‌ಗಾಂಧಿ ಅವಧಿ ಹಣ ಪೋಲು,ಡಾ.ಕೆ.ಲಕ್ಷ್ಮಣ್

CTD 27 BJP-04
Published on

ಚಿತ್ರದುರ್ಗ ಕೇಂದ್ರ ಸರ್ಕಾರ ಹಲವು ಯೋಜನೆಗಳ ಮೂಲಕ ರಾಜ್ಯಕ್ಕೆ ಲಕ್ಷಾಂತರ ಕೋಟಿ ರೂ. ಅನುದಾನ ನೀಡಿದ್ದರ ಫಲವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ಲಕ್ಷ್ಮಣ್ ಹೇಳಿದರು.

ದೇವರಾಜು ಅರಸ್ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ 9 ವರ್ಷದ ಸಾಧನೆ ಕುರಿತು ಬಿಜೆಪಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಚರ್ಚೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜೀವ್‌ಗಾಂಧಿ ಆಡಳಿತದಲ್ಲಿ ಬಡ ಫಲಾನುಭವಿಗಳಿಗೆ ನೀಡುತ್ತಿದ್ದ ಸೌಲಭ್ಯದಲ್ಲಿ ಶೇ 85ರಷ್ಟು ಹಣ ವ್ಯರ್ಥವಾಗುತ್ತಿತ್ತು. ಆದರೀಗ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ತಲುಪುವಂತೆ ಮಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು, ಮೋದಿ. ರಾಷ್ಟ್ರಕ್ಕೆ ಸಮರ್ಪಿಸಿಕೊಂಡಿರುವ ಅವರು ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಎಂಬ ಗುರಿಯೊಂದಿಗೆ ಭಾರತ ಮುನ್ನಡೆಸುತ್ತಿದ್ದಾರೆ ಎಂದರು.

ಕರೊನಾ ಲಸಿಕೆ ಪ್ರತಿ ಡೋಸ್‌ಗೆ ಕೆಲ ದೇಶಗಳಲ್ಲಿ 80 ಸಾವಿರ ರೂ. ನಿಗದಿಯಾಗಿದೆ. ಆದರೆ, ಭಾರತದಲ್ಲಿ ಮೂರು ಬಾರಿ ಎಲ್ಲರಿಗೂ ಉಚಿತ ಲಸಿಕೆ ಹಾಕಲಾಯಿತು. 90 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಿಸಲಾಯಿತು. ಈಗಲೂ 80 ಕೋಟಿ ಜನರಿಗೆ ಪಡಿತರ ನೀಡಲಾಗುತ್ತಿದೆ. ಬಿಜೆಪಿ ಎಲ್ಲಿಯೂ ಜಾತಿ-ಧರ್ಮ ಹೆಸರಲ್ಲಿ ಬೇಧ ಮಾಡಿಲ್ಲ ಎಂದು ಹೇಳಿದರು.

ಹಿಂದುತ್ವ ಎಂಬುದು ಒಂದು ಧರ್ಮವಲ್ಲ. ಅದೊಂದು ಕ್ರಮಬದ್ಧ ಜೀವನ ಪದ್ಧತಿ. ಕೇಂದ್ರ ಸರ್ಕಾರ ಅಪಘಾತದಲ್ಲಿ ಮಡಿದವರಿಗೆ ಪರಿಹಾರ ಸೇರಿ ಅನೇಕ ಯೋಜನೆ ರೂಪಿಸಿದೆ. 1 ವರ್ಷದ ನಂತರ ಬಿಜೆಪಿ, ಕಾಂಗ್ರೆಸ್ ನಡುವಿನ ಪ್ರಗತಿ ಪತ್ರ ನೋಡಿದರೆ ಜನರಿಗೆ ಅರ್ಥವಾಗಲಿದೆ. ಚುನಾವಣೆ ವೇಳೆಯಷ್ಟೇ ರಾಜಕಾರಣ. ಆನಂತರ ಅಭಿವೃದ್ಧಿಗೆ ಮಾತ್ರ ಪ್ರಧಾನಿ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಉಚಿತ ಗ್ಯಾರಂಟಿಗಳು ಕೆಲಸ ಮಾಡಿದ್ದು, ಸೋತಿದ್ದೇವೆ. ಆದರೆ, ಇದರಿಂದ ದಿವಾಳಿ ಆಗುವ ಸಾಧ್ಯತೆಯೇ ಹೆಚ್ಚು. 60ಸಾವಿರ ಕೋಟಿ ರೂ. ಇದಕ್ಕೆ ಬೇಕಾಗುತ್ತದೆ. ಇವು ಭ್ರಷ್ಟಾಚಾರದ ಗ್ಯಾರಂಟಿ ಆಗಲಿದೆ. ಆದ್ದರಿಂದ ಉಚಿತ ಮತ್ತು ಜನಕಲ್ಯಾಣ ಯೋಜನೆಗಳ ನಡುವೆ ಲಕ್ಷ್ಮ್ಮಣ ರೇಖೆ ಇರಬೇಕು ಎಂದು ಅಭಿಪ್ರಾಯಪಟ್ಟರು.

ಭಾರತವೀಗ ವಿಶ್ವದ 5ನೇ ಅತೀ ದೊಡ್ಡ ಆರ್ಥಿಕ ದೇಶವಾಗಿದೆ. ಜಿಡಿಪಿ 7.2ಗೆ ಏರಿಕೆಯಾಗಿದೆ. ಮಹಿಳೆಯರಿಗೂ ಆದ್ಯತೆ ನೀಡಿ ಉನ್ನತ ಸ್ಥಾನಮಾನ ನೀಡಿದ್ದಾರೆ. ಭಯೋತ್ಪಾದನೆ ತಡೆ, ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು.

2024ರ ಲೋಕಸಭಾ ಚುನಾವಣೆ ಮೋದಿ ನೇತೃತ್ವದಲ್ಲೇ ನಡೆಯಲಿದೆ. ಇಡೀ ದೇಶದಲ್ಲಿ ಅವರಿಗೆ ಪರ್ಯಾಯ ನಾಯಕ ಯಾರೂ ಇಲ್ಲ. ಯಾವುದೇ ಪಕ್ಷ ಹೊಂದಾಣಿಕೆ ಮಾಡಿಕೊಂಡರು ಪ್ರಯೋಜನವಿಲ್ಲ. ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಳ, ವಂದೇ ಭಾರತ್ ರೈಲು, ಮೆಟ್ರೋ ರೈಲು, ಆಮದು ಬದಲು ಮೊಬೈಲ್ ಫೋನ್‌ಗಳ ತಯಾರಿಕೆ ಹೀಗೆ ಆಧುನಿಕವಾಗಿ ವೇಗ ಪಡೆದುಕೊಳ್ಳುತ್ತಿದೆ. ಇದನ್ನು ವಿರೋಧಿಗಳು ಸಹಿಸದೇ ಆರೋಪಿಸುತ್ತಿದ್ದಾರೆ ಎಂದು ದೂರಿದರು.

ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಹೊಸ ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ವಿನೂತನ ಅವಕಾಶ ದೊರೆಯಲಿವೆ. ಕಲೆ, ವಿಜ್ಞಾನ, ಸಂಸ್ಕೃತಿ, ಸಂಸ್ಕಾರ ಎಲ್ಲವನ್ನೂ ಅಲ್ಲಿ ಕಲಿಯಲು ಸಾಧ್ಯವಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಯುವ ಮುಖಂಡ ಎಂ.ಸಿ.ರಘುಚಂದನ್ ಇತರರಿದ್ದರು.

ಮುಖ್ಯಾಂಶಗಳು
ಮುದ್ರಾ ಯೋಜನೆಯಡಿ 23 ಕೋಟಿ ಜನರಿಗೆ ಬ್ಯಾಂಕ್ ಸಾಲ
ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 4 ಕೋಟಿ ಜನರಿಗೆ ವಸತಿ ಸೌಕರ್ಯ
ಕಾಂಗ್ರೆಸ್‌ನ ಕೇಂದ್ರ ಸರ್ಕಾರ ಅವಧಿಯಲ್ಲಿ 12 ಲಕ್ಷ ಕೋಟಿ ರೂ. ಹಗರಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net