ರಾಜೀವ್ ಗಾಂಧಿ ಸದ್ಭಾವನಾ ಯಾತ್ರೆ ಜ್ಯೋತಿಗೆ ಅದ್ದೂರಿ ಸ್ವಾಗತ

mysore
Published on

 ಮೈಸೂರು: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 34ನೇ ಸದ್ಭಾವನಾ ಯಾತ್ರೆಯ ಜ್ಯೋತಿಯನ್ನು ನಗರದಲ್ಲಿ ಗುರುವಾರ ಸಂಜೆ ಬರಮಾಡಿಕೊಳ್ಳಲಾಯಿತು.

ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜ್ಯೋತಿಯನ್ನು ಕೆ.ಆರ್.ವೃತ್ತದಲ್ಲಿ ಸ್ವೀಕರಿಸಲಾಯಿತು. ಮೊದಲಿಗೆ ರಾಷ್ಟ್ರಗೀತೆಯೊಂದಿಗೆ ಸಭೆ ನಡೆಸಲಾಯಿತು. ನಂತರದಲ್ಲಿ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ಭಾರತದ ಸೈನಿಕರಿಗೆ ನೈತಿಕ ಬೆಂಬಲ ಘೋಷಣೆ ಮಾಡಲಾಯಿತು.

ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ರಾಜೀವ್‌ಗಾಂಧಿ ಅವರು ಅಗಲಿ ಇಂದಿಗೆ 34 ವರ್ಷ ಕಳೆದಿದ್ದರೂ ಅವರು ದೇಶಕ್ಕೆ ಕೊಟ್ಟಂತಹ ಕೊಡುಗೆಗಳು ಚಿರಸ್ಥಾಯಿಯಾಗಿ ಉಳಿದಿವೆ. ಸಂಪರ್ಕ ಕ್ರಾಂತಿಯ ಮುಖಾಂತರ ಭಾರತಕ್ಕೆ ತಂತ್ರಜ್ಞಾನದ ಆಧುನಿಕ ಸ್ಪರ್ಶವನ್ನು ಕೊಟ್ಟರು. 18 ವರ್ಷಕ್ಕೆ ಮತದಾನದ ಹಕ್ಕನ್ನು ಜಾರಿಗೊಳಿಸಿದರು ಎಂದು ಹೇಳಿದರು.

ಪ್ರಸ್ತುತ ಭಾರತವು ಭಯೋತ್ಪಾದನೆಯ ವಿರುದ್ಧ ಸಿಡಿದೆದ್ದು ಜಯ ಸಾಧಿಸಿದೆ. ಈ ಜಯಕ್ಕೆ ಕಾರಣೀಕರ್ತರಾದ ಎಲ್ಲ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.

ಭಯೋತ್ಪಾದನೆ ಎಂಬುದು ಅಶಾಂತಿ ಮತ್ತು ಅಸ್ಥಿರತೆಯ ಸಂಕೇತ. ಹಿಂದೆ ಉಗ್ರರ ದಾಳಿಗೆ ರಾಜೀವ್ ಗಾಂಧಿ ಸಹ ಹುತಾತ್ಮರಾಗಿದ್ದಾರೆ. ಅವರು ಮಡಿದ ದಿನವನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಎಂದು ಘೋಷಣೆ ಮಾಡಿದ್ದು, ಭಯೋತ್ಪಾದನೆಯ ವಿರುದ್ಧ ಸಮರ ಸಾರಿ ಶಾಂತಿ, ಸ್ಥಿರತೆಯನ್ನು ರಾಷ್ಟ್ರದಲ್ಲಿ ನಿರ್ಮಾಣ ಮಾಡುವ ಸಂಕಲ್ಪವನ್ನು ಈ ರಥಯಾತ್ರೆ ಹೊಂದಿದೆ ಎಂದು ತಿಳಿಸಿದರು

ಸದ್ಭಾವನ ಯಾತ್ರಾ ಸಮಿತಿ ರಾಜ್ಯ ಸಂಚಾಲಕ ದೊರೆ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್, ನಗರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಎಡತಲೆ ಮಂಜುನಾಥ್, ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಎಂ.ಶಿವಪ್ರಸಾದ್, ಹುಣಸೂರು ಬಸವಣ್ಣ, ಡೇರಿ ವೆಂಕಟೇಶ್, ಸಾ.ಮಾ.ಯೋಗೇಶ್, ನಾಗೇಶ್, ಶಿವಶಂಕರಮೂರ್ತಿ, ಡಾ.ನಾಗರಾಜು, ಜಿ.ಮಹದೇವು, ಕಾಂತರಾಜು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net