

ತೇರದಾಳ: ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜಯಂತಿ ಆಚರಣೆಗೆ ಅಧಿಕಾರಿಗಳು ಅನುಮತಿ ನೀಡದ ಕಾರಣ ಪುರಸಭೆ ಮುಸ್ಲಿಂ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ತುಣುಕು ಹರಿದಾಡುತ್ತಿದ್ದು, ಸದಸ್ಯ ಪೈಯಾಜ್ ಇನಾಂದಾರ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಮುಂದಾದಾಗ ಸರ್ಕಾರದಿಂದ ಆದೇಶ ಆಗಬೇಕೆಂದು ಅಧಿಕಾರಿಗಳು ಹೇಳಿದರು. ನ.11ರಂದು ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ಆಚರಿಸಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ನೂತನ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನ.25ರಂದು ಜಯಂತಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತು.
ಇದಕ್ಕೂ ಪೊಲೀಸ್ ಇಲಾಖೆ ಅನುಮತಿ ನೀಡುತ್ತಿಲ್ಲ. ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅನುಮತಿ ಕೊಡಿಸುವ ಭರವಸೆ ನೀಡಿದರು. ಬೇರೆ ಎಲ್ಲ ವರ್ಗದ ಮಹನೀಯರ ಜಯಂತಿ ಆಚರಣೆಗೆ ಅನುಮತಿ ನೀಡುತ್ತಾರೆ. ನಮ್ಮ ಧರ್ಮದವರಿಗೆ ಮಾತ್ರ ಏಕೆ ನೀಡುವುದಿಲ್ಲ ಎಂಬುದು ನಮ್ಮ ಪ್ರಶ್ನೆಯಾಗಿದೆ. ಅನುಮತಿ ಸಿಗದಿದ್ದಾಗ ನಮ್ಮ ಸಮಾಜದ ಮುಖಂಡರು, ಯುವಕರು ನಿಮ್ಮಿಂದ ಒಂದು ಜಯಂತಿ ಕಾರ್ಯಕ್ರಮಕ್ಕೆ ಅನುಮತಿ ಕೊಡಿಸಲು ಆಗದಿದ್ದರೆ ಮತ್ಯಾಕೆ ಅಧಿಕಾರದಲ್ಲಿದ್ದೀರಿ? ಕೂಡಲೇ ರಾಜೀನಾಮೆ ನೀಡಿ ಎಂದು ಭಾನುವಾರ ನಡೆದ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ನಾವು ಐದು ಜನ ಪುರಸಭೆ ಸದಸ್ಯರಿದ್ದು, ಹಿರಿಯರೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುತ್ತೇವೆ. ನಂತರ ನಮ್ಮ ರಾಜೀನಾಮೆ ಕುರಿತು ನಿರ್ಧಾರವಾಗಲಿದೆ ಎಂದು ಫೈಯಾಜ್ ಇನಾಂದಾರ ತಿಳಿಸಿದ್ದಾರೆ. ಭಾನುವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳು ಜಯಂತಿ ಆಚರಣೆಗೆ ಅನುಮತಿ ನೀಡದ ಕುರಿತು ಹಾಗೂ ಕಾಂಗ್ರೆಸ್ ಮುಖಂಡರ ಕುರಿತು ಅಸಮಾಧಾನದ ಮಾತುಗಳ ವಿಡಿಯೋ ವೈರಲ್ ಆಗುತ್ತಿದೆ.