ರಾಜೀನಾಮೆ ಬೆದರಿಕೆಗೂ ಜಗ್ಗದ ಸಿಎಂ ; ಖಾತೆ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡ ಮಾಧುಸ್ವಾಮಿ ; ಮುಖ್ಯಮಂತ್ರಿಯಿಂದ ಅಂತರ ಕಾಯ್ದುಕೊಂಡ ಸಚಿವ

Madhuswamy
Published on

ತುಮಕೂರು: ಕಾನೂನು ಹಾಗೂ ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಖಾತೆಯಿಂದ ಜೆ.ಸಿ.ಮಾಧುಸ್ವಾಮಿ ಅವರಿಗೆ ಕೊಕ್ ನೀಡಲಾಗಿರುವುದು ರಾಜ್ಯ ರಾಜಕಾರಣದಲ್ಲಿ ಆಶ್ಚರ್ಯ ಮೂಡಿಸಿದೆ. ಖಾತೆ ಬದಲಾವಣೆಯಿಂದ ಕೋಪಗೊಂಡಿರುವ ಸಚಿವ ಮಾಧುಸ್ವಾಮಿ ಗುರುವಾರ ಸಿದ್ಧಗಂಗಾ ಮಠದಲ್ಲಿ ಆಯೋಜಿಸಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿಯೂ ಸಿಎಂ ಯಡಿಯೂರಪ್ಪ ಜತೆ ಭಾಗವಹಿಸದೆ ಅವರ ನಿರ್ಗಮನದ ನಂತರ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದರು.

ಕಳೆದ 3 ದಿನಗಳಿಂದಲೂ ಖಾತೆ ಬದಲಾವಣೆ ಬಗ್ಗೆ ನಡೆಯುತ್ತಿದ್ದ ಚರ್ಚೆ ಸಂದರ್ಭದಲ್ಲಿ ಖಾತೆ ಬದಲಾವಣೆ ಅನಿವಾರ್ಯವಾದರೆ ಕಾನೂನು ಖಾತೆ ಹಿಂಪಡೆಯಿರಿ. ಆದರೆ, ಜನರೊಂದಿಗೆ ಇರಲು ಅವಕಾಶವಿರುವ ಸಣ್ಣನೀರಾವರಿ ಖಾತೆ ಉಳಿಸಿ, ಅದಾಗದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಮಾಧುಸ್ವಾಮಿ ಹಾಕಿದ್ದ ಬೆದರಿಕೆಗೂ ಸಿಎಂ ಜಗ್ಗಿಲ್ಲ ಎನ್ನಲಾಗಿದೆ.

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನದ ಸಂದರ್ಭ ಹಾಗೂ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರ ಬಲಗೈ ಬಂಟನಾಗಿ ಗುರುತಿಸಿಕೊಂಡಿದ್ದ ಜೆ.ಸಿ.ಮಾಧುಸ್ವಾಮಿ, ಬಿಎಸ್‌ವೈ ಪಾಲಿನ ಆಪತ್ಭಾಂದವರೆಂದೇ ಗುರುತಿಸಿ ಕೊಂಡಿದ್ದಾರೆ. ಸಂಸದೀಯ ಪಟುವಾಗಿ ಅಪಾರ ಜ್ಞಾನವಿರುವ ಮಾಧುಸ್ವಾಮಿ, ಸಿಎಂ ಅವರನ್ನು ಸಾಕಷ್ಟು ಸಲ

ಮುಜಗರದಿಂದ ಪಾರು ಮಾಡಿದ್ದರು.

ಎಂಐ ಇಲಾಖೆಗೆ ಡಿಮಾಂಡ್ ತಂದ ಹೆಗ್ಗಳಿಕೆ: ಸರ್ಕಾರದಲ್ಲಿ ಅಷ್ಟೇನು ಮಹತ್ವವಿಲ್ಲದ ಸಣ್ಣ ನೀರಾವರಿ ಇಲಾಖೆಗೆ ಕಾಯಕಲ್ಪ ನೀಡಿ, ಇಲಾಖೆಯನ್ನು ಸಚಿವರು ಬಯಸಿ ಕೇಳುವಂತೆ ಮಾಡಿರುವ ಹೆಗ್ಗಳಿಕೆ ಮಾಧುಸ್ವಾಮಿಗೆ ಸಲ್ಲಬೇಕಿದೆ. ಇಲಾಖೆ ರೂಪಿಸಿರುವ ಅಟಲ್ ಭೂಜಲ ಯೋಜನೆಯನ್ನು ದೇಶದೆಲ್ಲೆಡೆ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವುದು ಇದಕ್ಕೆ ಒಂದು ಉದಾಹರಣೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು ತಾಲೂಕುಗಳ ಕೆರೆ ತುಂಬಿಸಲು ಶಾಶ್ವತ ನೀರಾವರಿ ಯೋಜನೆಗಳನ್ನು ಮುಂಜೂರು ಮಾಡಿಸಿದ್ದು, ಬೆಂಗಳೂರಿನ ಕೊಳಚೆ ನೀರು ಸಂಸ್ಕರಿಸಿ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗೆ ಹರಿಸಿದ್ದು ಹಾಗೂ ಭ್ರಷ್ಟಾಚಾರದ ಕೂಪವಾಗಿದ್ದ ಇಲಾಖೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಛವಾಗಿಸಿದ್ದು ಮಾಧುಸ್ವಾಮಿ ಹೆಗ್ಗಳಿಕೆ. ಮಾಧುಸ್ವಾಮಿ ಅಸಮಾಧಾನವಿಲ್ಲ ಎಂದು ಹೇಳಿಕೆ ನೀಡಿದ್ದಾರಾದರೂ ಖಾತೆ ಬದಲಾವಣೆಗೆ ಪ್ರತಿಭಟನೆ ರೂಪವಾಗಿ ರಾಜೀನಾಮೆ ನೀಡಲು ಮುಂದಾಗಿದ್ದು ನಿಜ ಎನ್ನಲಾಗಿದೆ. ಸಂಕಷ್ಟ ಕಾಲದಲ್ಲಿ ಅವರ ಬೆನ್ನಿಗೆ ನಿಂತು ಸಮರ್ಥಿಸಿದ್ದನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಮರೆತಿದ್ದಾರೆ, ಕ್ರಿಯಾಶೀಲವಾಗಿ ಕೆಲಸ ಮಾಡಿದರೂ ಖಾತೆ ಬದಲಿಸಿದ್ದಾರೆ ಎಂದು ಆಪ್ತರ ಬಳಿಯೂ ಕೋಪ ಹೊರಹಾಕಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ವದಂತಿಗೆ ತೆರೆ: ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಮಾಧುಸ್ವಾಮಿ ಬೆಂಗಳೂರಿನಲ್ಲಿ ರಾಜೀನಾಮೆಯ ಮಾತನ್ನಾಡಿ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಗೆ ಆಗಮಿಸಿದ್ದರು. ಗುರುವಾರ ಬೆಳಗ್ಗೆ ಖಾತೆ ಹಂಚಿಕೆ ಫೈನಲ್ ಆದ ಕೂಡಲೇ ಮಾಧುಸ್ವಾಮಿ ತಮ್ಮ ಆಪ್ತ ಸಹಾಯಕ ಅರುಣ್ ಕೈಯಲ್ಲಿ ರಾಜೀನಾಮೆ ಪತ್ರವನ್ನು ಸಿಎಂಗೆ ಕಳುಹಿಸಿದ್ದಾರೆ ಎಂಬ ವದಂತಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅಧಿಕಾರಕ್ಕಾಗಿ ರಾಜೀಯಾಗುವ ರಾಜಕಾರಣಿ ಅಲ್ಲ ಎಂಬುದನ್ನು ತಿಳಿದಿದ್ದ ಅವರ ಬೆಂಬಲಿಗರೂ ರಾಜೀನಾಮೆ ನೀಡಿರುವುದು ನಿಜ ಎಂದೇ ಭಾವಿಸಿದ್ದರು. ಆದರೆ, ಕೇಂದ್ರ ನಾಯಕರ ಜತೆ ಚರ್ಚಿಸಿದ ಬಳಿಕ ಮಾಧುಸ್ವಾಮಿ ಯೂಟರ್ನ್ ಹೊಡೆದರು. ಸಿದ್ಧಗಂಗಾ ಕಾರ್ಯಕ್ರಮಕ್ಕೆ ಆಗಮಿಸಿ ನಾನು ರಾಜೀನಾಮೆ ನೀಡುವ ಅಥವಾ ಅಸಮಾಧಾನವಾಗಿರುವ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ಎಂದು ವದಂತಿಗೆ ತೆರೆ ಎಳೆದರು.

ಸಂಪುಟ ಸಭೆಗೆ ಗೈರು: ಖಾತೆ ಬದಲಾವಣೆ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸದ ಮಾಧುಸ್ವಾಮಿ ಗುರುವಾರ ಸಂಜೆ ಸಚಿವ ಸಂಪುಟ ಸಭೆಗೂ ಗೈರಾಗುವ ಮೂಲಕ ಸಿಎಂ ನಿರ್ಧಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು. ಸರ್ಕಾರದ ಸಭೆ, ಸಮಾರಂಭಗಳಿಗೆ ಮಾಧುಸ್ವಾಮಿ ತಪ್ಪಿಸಿಕೊಂಡ ಉದಾಹರಣೆಗಳು ವಿರಳ. ಇನ್ನು ಮಹತ್ವದ ಸಚಿವ ಸಂಪುಟ ಸಭೆಗೆ ಪೂರ್ವ ತಯಾರಿಯಾಗಿ ಹೋಗಿ ವಾದ ಮಂಡಿಸುತ್ತಿದ್ದ ಅವರು ಖಾತೆ ಬದಲಾವಣೆಯಿಂದ ತೀವ್ರ ಘಾಸಿಕೊಂಡಿದ್ದಾರೆ ಎನ್ನಲಾಗಿದೆ. ಸಿದ್ಧಗಂಗಾ ಮಠದಲ್ಲಿಯೂ ಸಿಎಂ ನಿರ್ಗಮನದ ನಂತರ ಮಾಧುಸ್ವಾಮಿ ಕಾಣಿಸಿಕೊಂಡರು. ಆದರೆ, ವಸಂತನರಸಾಪುರದಲ್ಲಿ ಕೇಂದ್ರ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದರು.

ಕೇಂದ್ರ ಮೆಚ್ಚಿದ ಅಟಲ್ ಭೂಜಲ: ಪ್ರಧಾನಿ ನರೇಂದ್ರಮೋದಿ ಅವರು ಮಹತ್ವಾಕಾಂಕ್ಷಿ ಅಟಲ್‌ಭೂಜಲ ಯೋಜನೆ ಘೋಷಿಸಿದ್ದರು, ರೂಪುರೇಷೆ ಇಲ್ಲದ ಯೋಜನೆಗೆ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಸೂಚಿಸಿದಾಗ ಸಣ್ಣನೀರಾವರಿ ಇಲಾಖೆ ಮೂಲಕ ರೂಪಿಸಿರುವ ಕಾರ್ಯಕ್ರಮವನ್ನು ಕೇಂದ್ರ ಮಚ್ಚಿ ದೇಶಾದ್ಯಂತ ಅಳವಡಿಸಿಕೊಂಡಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಮೇಲ್ವಿಚಾರಣೆಯಲ್ಲಿ ರೂಪಿಸಿದ್ದ ಕಾರ್ಯಕ್ರಮ ತುಮಕೂರು ಸೇರಿ ರಾಜ್ಯದ 40 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗುತ್ತಿದೆ. ಈ ಸಂದರ್ಭದಲ್ಲಿ ಕ್ರಿಯಾಶೀಲ ಸಚಿವರಿಂದ ಮಹತ್ವದ ಖಾತೆ ಹಿಂಪಡೆದಿದ್ದು ಅಭಿವೃದ್ಧಿಗಾದ ಹಿನ್ನೆಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net