ರಾಜೀನಾಮೆ ನೀಡಿ, ತನಿಖೆ ಎದುರಿಸಲಿ

21 YERRISWAMY 02
Published on

ಬಳ್ಳಾರಿ : ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದಲ್ಲಿ ಆರೋಪ ಕೇಳಿ ಬಂದಿರುವುದರಿಂದ, ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮಾಜಿ ಸಂಸದ ಮುನಿಸ್ವಾಮಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಹಲವು ನಾಯಕರು ತಮ್ಮ ವಿರುದ್ಧ ಆರೋಪ ಕೇಳಿ ಬಂದ ವೇಳೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿದ್ದಾರೆ. ಅದರಂತೆ, ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಿ, ಕ್ಲೀನ್ ಚಿಟ್ ಪಡೆದು ಅಧಿಕಾರ ಪಡೆಯಲಿ. ರಾಜ್ಯಪಾಲರು ಗಲ್ಲು ಶಿಕ್ಷೆಗೆ ಅನುಮತಿ ನೀಡಿಲ್ಲ, ಕೇವಲ ತನಿಖೆಗೆ ಆದೇಶ ನೀಡಿದ್ದಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರಿಂದ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟಿಸಿ, ಏಕವಚನದಲ್ಲಿ ಟೀಕಿಸಿ, ಪೋಸ್ಟರ್‌ಗಳಿಗೆ ಚಪ್ಪಲಿ ಎಸೆದು ಅವಮಾನ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅಹಿಂದ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ಪಕ್ಷದ ಅಹಿಂದ ನಾಯಕರನ್ನು ತುಳಿದು ಸಿಎಂ ಕುರ್ಚಿ ಗಿಟ್ಟಿಸಿಕೊಂಡರು. ಕಾಂಗ್ರೆಸ್ ನಾಯಕ ಐವನ್ ಡಿಸೋಜ ಪಾಕಿಸ್ತಾನದಲ್ಲಿನ ಅಥವಾ ಇಟಲಿಯಲ್ಲಿ ಇದ್ದಿಯೋ ನೀನು ಇರುವುದು ಭಾರತದಲ್ಲಿ ಇಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ, ಮಾತನಾಡುವ ಮುನ್ನ ಎಚ್ಚರವಿರಲಿ ಎಂದರು. ಸಚಿವ ಜಮೀರ್ ಅಹಮದ್ ಜೈ ಬೀಮ್ ಹೇಳುವುದಕ್ಕೆ ನಾಲಾಯಕ್ ಎಂದು ವಾಗ್ದಳಿ ನಡೆಸಿದರು. ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡಿದವರ ಎಲ್ಲ ನಾಯಕರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಈಗಾಗಲೇ ಎಡಿಜಿಪಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಕ್ರಮ ಜರುಗಿಸಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ರಾಜ್ಯಪಾಲರ ವಿರುದ್ಧ ಹೇಳಿಕೆ ಖಂಡಿಸಿ, ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.ಪ್ರಮುಖರಾದ ಜಿಲ್ಲಾದ್ಯಕ್ಷ ಅನಿಲಕುಮಾರ ಮೋಕಾ, ಮುಖಂಡರಾದ ಡಾ.ಎಸ್.ಜೆ.ವಿ.ಮಹಿಪಾಲ್, ಡಾ.ಬಿ.ಕೆ. ಸುಂದರ್, ತಿಮ್ಮಪ್ಪ, ಮಲ್ಲೇಶ, ಮೇಕಲ ವಿರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net