ರಾಜಿ ಮಾಡಿಸಲು ವಕೀಲರು ಕ್ರಮ ವಹಿಸಿ

RemasterDirector_1a5c03258
_autotone
Published on

ಪಿರಿಯಾಪಟ್ಟಣ : ಡಿ.14 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳನ್ನು ರಾಜಿ ಮಾಡಿಸಲು ವಕೀಲರು ಅಗತ್ಯ ಸಹಕಾರ ನೀಡಬೇಕು ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶರಾದ ಎಂ.ರಾಜು ಮನವಿ ಮಾಡಿದರು.

ಪಟ್ಟಣದ ವಕೀಲರ ಭವನದಲ್ಲಿ ಗುರುವಾರ ರಾಷ್ಟ್ರೀಯ ಲೋಕ ಅದಾಲತ್ ಮತ್ತು ಡಿ.26 ರಂದು ನಡೆಯುವ ಸಂವಿಧಾನ ದಿನಾಚರಣೆ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಕಕ್ಷಿದಾರರ ಮನವೊಲಿಸುವ ಮೂಲಕ ಎಂವಿಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಇನ್ಶೂರೆನ್ಸ್ ಕಂಪನಿಗೆ ನೋಟಿಸ್ ನೀಡಿ ನ್ಯಾಯಾಲಯಕ್ಕೆ ಕರೆಸಿಕೊಂಡು ಸೂಚನೆ ನೀಡಲಾಗುವುದು. ಚೆಕ್‌ಬೌನ್ಸ್ ಪ್ರಕರಣಗಳು ಹಾಗೂ ಬ್ಯಾಂಕುಗಳು ಸಲ್ಲಿಸಿರುವ ಸಾಲ ವಸೂಲಿ ದಾವೆಗಳನ್ನು ರಾಜಿ ಮಾಡಿಸಲು ವಕೀಲರು ಮುಂದಾಗುವಂತೆ ತಿಳಿಸಿದರು.

ಡಿ.26 ರಂದು ಸಂವಿಧಾನ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಹೊಸ ಕಾಯ್ದೆಗಳ ಬಗ್ಗೆ ವಕೀಲರಿಗೆ ಅರಿವು ಮೂಡಿಸುವ ಸಲುವಾಗಿ ವಿಷಯ ತಜ್ಞರನ್ನು ಕರೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ನ್ಯಾಯಾಧೀಶರಾದ ಎಂ.ಆರ್.ಯೋಗೀಶ್ ಮತ್ತು ಶ್ವೇತಾ ಅವರು ಲೋಕ ಅದಾಲತ್ ಯಶಸ್ವಿಯಾಗಲು ವಕೀಲರು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.

ನ್ಯಾಯಾಲಯದ ಕಲಾಪ ಹೊರಗುಳಿದ ವಕೀಲರು :

ಸಭೆಯ ನಂತರ ವಕೀಲರಿಗೆ ವೃತ್ತಿ ತೆರಿಗೆ ವಿಧಿಸುವ ನಿರ್ಧಾರವನ್ನು ಮಾಡಿ ಸರ್ಕಾರ ಮೈಸೂರಿನ ಕೆಲವು ವಕೀಲರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ಹೊರಗುಳಿಯಲು ಸರ್ವಾನುಮತದಿಂದ ನಿರ್ಣಯಿಸಿ ನ್ಯಾಯಾಲಯದ ಕಲಾಪದಿಂದ ಹೊರಗುಳಿದರು. ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಶಂಕರ್, ಖಜಾಂಚಿ ಹರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net