

ವಿಜಯವಾಣಿ ಸುದ್ದಿಜಾಲ ಶಿರಸಿ: ಕನ್ನಡಿಗರ ಮೊದಲ ಸಾಮ್ರಾಜ್ಯದ ಭಾಗವಾಗಿದ್ದ ಶಿರಸಿಯಲ್ಲಿ ರಾಜಾ ಮಯೂರವರ್ಮನ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ‘ನಾವು ಕನ್ನಡಿಗರು’ ಸಂಘಟನೆ ಕಾರ್ಯಕರ್ತರು ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಪ್ರಮುಖರು, ಕನ್ನಡಿಗರ ಮೊದಲ ಸಾಮ್ರಾಜ್ಯವಾದ ಬನವಾಸಿ ಭಾಗವಾಗಿದ್ದ ಶಿರಸಿ ಪ್ರದೇಶದಲ್ಲಿ ಕನ್ನಡಿಗರ ಮೊದಲ ದೊರೆ ರಾಜ ಮಯೂರವರ್ಮನ ಪ್ರತಿಮೆ ಇಲ್ಲ. ಬದಲಿಗೆ ಮರಾಠ ಸಾಮ್ರಾಜ್ಯದ ಶಿವಾಜಿಯ ಪ್ರತಿಮೆ ಇರುವುದು ಕನ್ನಡಿಗರು ತಲೆ ತಗ್ಗಿಸಬೇಕಾದ ಸಂಗತಿ. ಬೆಳಗಾವಿಯಲ್ಲಿ ನಡೆದ ಘಟನೆಗಳು ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಚ್ಚರಿಸಿದೆ, ಕಣ್ತೆರೆಸಿದೆ. ಅಪ್ಪಟ ಕನ್ನಡ ನೆಲವಾದ ಶಿರಸಿಯಲ್ಲಿ ಪರಕೀಯ ರಾಜರನ್ನು ಮೆರೆಸುವ ಬದಲು ರಾಜಾ ಮಯೂರವರ್ಮರ ಪ್ರತಿಮೆಯನ್ನು ಈಗಾಗಲೇ ಇರುವ ಶಿವಾಜಿಯ ಪ್ರತಿಮೆಗಿಂತ ವೈಭವೋಪಿತವಾಗಿ ಸ್ಥಾಪಿಸಿ ಕನ್ನಡಿಗರ ಸ್ವಾಭಿಮಾನವನ್ನು, ಅಭಿಮಾನವನ್ನು ಸ್ಥಳೀಯ ಸರ್ಕಾರವು ಮೆರೆಸಬೇಕು. ಕನ್ನಡಿಗರ ತಕ್ಷಣದ ಸಮಾಧಾನಕ್ಕಾಗಿ ನಗರದ ಯಾವುದಾದರೂ ಮುಖ್ಯ ವೃತ್ತಕ್ಕೆ ಮಯೂರವರ್ಮ ವೃತ್ತ ಎಂದು ನಾಮಕರಣ ಮಾಡಬೇಕು. ಅದೇ ರೀತಿ ನಗರವನ್ನು ಸ್ಥಾಪಿಸಿದ ಸೋದೆಯ ರಾಜ ರಾಮಚಂದ್ರ ನಾಯಕರ ಹೆಸರನ್ನು ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಇಟ್ಟು, ನಗರ ನಿರ್ವತೃನನ್ನು ಗೌರವಿಸುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಂಘಟನೆ ರಾಜ್ಯಾಧ್ಯಕ್ಷ ಗಣೇಶ ಭಟ್ಟ, ಪ್ರಮುಖರಾದ ಮಹೇಶ ನಾಯ್ಕ, ಮಹಾದೇವ ಚಲವಾದಿ, ಪ್ರಸನ್ನ ನಾಯ್ಕ, ಗಣೇಶ ಕಂಬಾರ, ಮದನ, ಸುಶೀಲಕುಮಾರ, ಸಂದೇಶ ನಾಯ್ಕ ಇತರರಿದ್ದರು.<