ರಾಜಸ್ವ ಸಂಗ್ರಹ ಗುರಿ ಸಾಧಿಸಿ

CTD 22 THIMMAPUR MEETING (1) (1)--03
Published on


ಚಿತ್ರದುರ್ಗ: ಸಮಾಜದ ಸ್ವಾಸ್ಥೃ ಹದಗೆಡಿಸುತ್ತಿರುವ ಗಾಂಜಾ, ಆಫೀಮು, ಇತರೆ ಮಾದಕ ವಸ್ತುಗಳ ನಿಯಂತ್ರಣ ಸೇರಿ ಅಬಕಾರಿ ಅಕ್ರಮ ತಡೆಯಲು ಹದ್ದಿನ ಕಣ್ಗಾವಲಿಡಲು ಮುಂದಾಗಿ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಅಬಕಾರಿ ಅಧಿಕಾರಿಗಳೊಂದಿಗೆ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಸೇರಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಇಲಾಖೆಗೆ ನಿಗದಿಪಡಿಸಿರುವ ರಾಜಸ್ವ ಸಂಗ್ರಹ ಗುರಿ ಸಾಧಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯೂ ಅಂತರರಾಜ್ಯ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಗಡಿ ಪ್ರದೇಶಗಳ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚು ನಿಗಾವಹಿಸಿ, ತಪಾಸಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಹೊರರಾಜ್ಯದ ಸೇಂದಿ, ಮದ್ಯ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನೂತನ ಆಶೋತ್ತರ, ನಿರೀಕ್ಷೆಗೆ ತಕ್ಕಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಪ್ರಗತಿ ಸಾಧಿಸಬೇಕು. ಕಳ್ಳಭಟ್ಟಿ ಸಾರಾಯಿ ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದರು.
ವಿಧಾನಸಭಾ ಚುನಾವಣೆ ವೇಳೆ ಜಿಲ್ಲೆಯಲ್ಲಿ ದಾಖಲಾದ ಅಬಕಾರಿ ಅಕ್ರಮದ ಪ್ರಕರಣಗಳಿಗೆ ಸೂಕ್ತ ಕ್ರಮವಹಿಸಿ, ಕಾನೂನು ಕ್ರಮ ಕೈಗೊಳ್ಳಿ. ಜಿಲ್ಲೆಗೆ ಹಂಚಿಕೆಯಾಗಿ, ಬಾಕಿ ಉಳಿದಿರುವ ಎಂಎಸ್‌ಐಎಲ್ ಮಳಿಗೆ ಶೀಘ್ರ ಮಂಜೂರಾತಿಗೆ ಮುಂದಾಗಿ ಎಂದು ಸೂಚಿಸಿದರು.
ಅಬಕಾರಿ ಉಪ ಆಯುಕ್ತ ಬಿ.ಮಾದೇಶ್ ಮಾತನಾಡಿ, 39 ಎಂಎಸ್‌ಐಎಲ್ ಮಳಿಗೆಗಳು ಹಂಚಿಕೆಯಾಗಿದ್ದು, ಅದರಲ್ಲಿ 33 ಮಂಜೂರಾಗಿವೆ. 6 ಬಾಕಿ ಉಳಿದಿವೆ. ಜಿಲ್ಲೆಯ ಅಬಕಾರಿ ಇಲಾಖೆಗೆ ಸಿಬ್ಬಂದಿ, ವಾಹನಗಳ ಕೊರತೆ ಇದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ತಹಸೀಲ್ದಾರ್ ಡಾ.ನಾಗವೇಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net