ರಾಜಶೇಖರ್ ತಾಪಂ ಅಧ್ಯಕ್ಷ, ಮುನಿನರಸಮ್ಮ ಉಪಾಧ್ಯಕ್ಷೆ

02.06.2020 SDLP 01
Published on

ಶಿಡ್ಲಘಟ್ಟ :  ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಚೀಮಂಗಲ ಕ್ಷೇತ್ರದ ಎಂ.ಕೆ.ರಾಜಶೇಖರ್, ಉಪಾಧ್ಯಕ್ಷರಾಗಿ ಕುಂಭಿಗಾನಹಳ್ಳಿ ಮುನಿನರಸಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಯಪ್ಪ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಅಭ್ಯರ್ಥಿಯಾಗಿ ಎಂ.ಕೆ.ರಾಜಶೇಖರ್, ಉಪಾಧ್ಯಕ್ಷ ಸ್ಥಾನಕ್ಕೆ ಮುನಿನರಸಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್‌ನ ಯಾವೊಬ್ಬ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಂ.ಕೆ.ರಾಜಶೇಖರ್ ಹಾಗೂ ಮುನಿನರಸಮ್ಮ ಅವರ ಅವಿರೋಧ ಆಯ್ದೆಯನ್ನು ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಘೋಷಿಸಿದರು.ತಹಸೀಲ್ದಾರ್ ಕೆ.ಅರುಂಧತಿ, ಇಒ ಬಿ.ಶಿವಕುಮಾರ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಶಿರಸ್ತೇದಾರ್ ಮಂಜುನಾಥ್, ಮುಖಂಡರಾದ ಬಿ.ಎನ್.ರವಿಕುಮಾರ್, ತಾದೂರು ರಘು ಇತರರಿದ್ದರು.

ಕಾಂಗ್ರೆಸ್ ಸದಸ್ಯರ ಗೈರು ಹಾಜರಿ : ಕಳೆದ ಬಾರಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರೀ ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದ ಕಾಂಗ್ರೆಸ್ ಸದಸ್ಯರು ಈ ಬಾರಿ ಗೈರು ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದರು. ತಾಪಂನ ಒಟ್ಟು 17 ಸದಸ್ಯರ ಪೈಕಿ ಜೆಡಿಎಸ್ 09, ಕಾಂಗ್ರೆಸ್ 08 ಸದಸ್ಯರ ಸಂಖ್ಯಾಬಲ ಹೊಂದಿವೆ. ಕಳೆದ ಬಾರಿ ತನ್ನ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್, ಜೆಡಿಎಸ್‌ನ ಓರ್ವ ಸದಸ್ಯನನ್ನು ತಮ್ಮತ್ತ ಸೆಳೆದುಕೊಂಡಿತ್ತು, ಇದಕ್ಕೆ ಪ್ರತಿಯಾಗಿ ಜೆಡಿಎಸ್ ಸಹ ಕಾಂಗ್ರೆಸ್ ಒಬ್ಬ ಸದಸ್ಯನ್ನು ತಮ್ಮತ್ತ ಸೆಳೆದುಕೊಂಡು ತಮ್ಮ ಅಭ್ಯರ್ಥಿಗಳನ್ನೇ ಅಧ್ಯಕ್ಷ ಉಪಾಧ್ಯಕ್ಷರನ್ನಾಗಿಸಿ ತಿರುಗೇಟು ನೀಡಿತ್ತು.

ಈ ಬಾರಿಯೂ ಅದೇ ರೀತಿಯ ವಿದ್ಯಮಾನಗಳು ನಡೆಯಬಹುದು ಎಂಬ ನಿರೀಕ್ಷೆಯಿತ್ತಾದರೂ ಕಾಂಗ್ರೆಸ್‌ನ 6 ಹಾಗೂ ಜೆಡಿಎಸ್‌ನಿಂದ ಕಾಂಗ್ರೆಸ್ ಕಡೆಗೆ ಹೋದ ಒಬ್ಬ ಸದಸ್ಯ ಸೇರಿ 7 ಮಂದಿ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಗೈರು ಹಾಜರಾಗಿದ್ದರು. ಜೆಡಿಎಸ್‌ನ 8 ಹಾಗೂ ಕಾಂಗ್ರೆಸ್‌ನಿಂದ ಜೆಡಿಎಸ್ ಕಡೆಗೆ ಹೊಗಿದ್ದ ಇಬ್ಬರು ಸೇರಿ ಒಟ್ಟು 10 ಸದಸ್ಯರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net