ರಾಜಶೇಖರ ನೀರಮಾನ್ವಿ ನಿಧನ

08 YERRISWAMY 06
Published on

ಬಳ್ಳಾರಿ : ನಗರದ ವೀರನಗೌಡ ಕಾಲನಿಯ ನಿವಾಸದಲ್ಲಿ ಕನ್ನಡದ ಶ್ರೇಷ್ಠ ಕಥೆಗಾರ ರಾಜಶೇಖರ ನೀರಮಾನ್ವಿ (83) ಗುರುವಾರ ನಿಧನರಾಗಿದ್ದಾರೆ. ನೀರಮಾನ್ವಿ ಅವರು ಕಳೆದ ಕೆಲ ವರ್ಷಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಅಗಲಿದ್ದಾರೆ. ಶುಕ್ರವಾರ ಮಧ್ಯಾಹ್ನ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಜರುಗಲಿದೆ.
ರಾಜಶೇಖರ ನೀರಮಾನ್ವಿ ಅವರು ರಾಯಚೂರು ಜಿಲ್ಲೆಯ ನೀರಮಾನ್ವಿ ಗ್ರಾಮದವರು. ಬಳ್ಳಾರಿಯ ವೀರಶೈವ ಪದವಿ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 1978ರಲ್ಲಿ ಹಂಗಿನ ಅರಮನೆಯ ಹೊರಗೆ ಇವರ ಮೊದಲ ಕಥಾ ಸಂಕಲನ ಹಾಗೂ ಎರಡನೇ ಕಥಾ ಸಂಕಲನ ಕರ್ಪೂರದ ಕಾಯದಲ್ಲಿ 1990ರಲ್ಲಿ ಲೋಕಾರ್ಪಣೆಗೊಂಡಿತು. ಕರ್ಪೂರದ ಕಾಯದಲ್ಲಿ ಕಥಾ ಸಂಕಲನವನ್ನು ಬಳ್ಳಾರಿಯ ಲೋಹಿಯಾ ಪ್ರಕಾಶನ ಹೊರ ತಂದಿತು. 1992ರಲ್ಲಿ ಲೋಹಿಯಾ ಪ್ರಕಾಶನ ಎರಡು ಕೃತಿಗಳನ್ನು ಒಟ್ಟುಗೂಡಿಸಿ ಸಮಗ್ರ ಕಥೆಗಳ ಸಂಕಲನ ಹೊರತಂದಿದೆ. ನೀರಮಾನ್ವಿ ಅವರ ಹಂಗಿನ ಅರಮನೆ ಹೊರಗೆ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಲಭಿಸಿದೆ. ನೀರಮಾನ್ವಿ ಅವರ ಸಾಹಿತ್ಯ ಕೃತಿಯನ್ನು ಗುರುತಿಸಿ ಸಾಹಿತ್ಯ ಅಕಾಡೆಮಿ ಗೌರವಿಸಿದೆ. ಗೋಕಾಕ್ ಚಳುವಳಿ, ಜೆಪಿ ಚಳುವಳಿ ಹಾಗೂ ವಾಟಾಳ್ ಚಳುವಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ನೀರಮಾನ್ವಿ ಅವರ ನಿಧನಕ್ಕೆ ನಗರದ ಗಣ್ಯರು, ಸಾಹಿತ್ಯಾಸಕ್ತರು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net