ರಾಜವೀರ ಮದಕರಿ ಜಾತ್ಯತೀತ ನಾಯಕ

Madakari
Published on

ಚಿತ್ರದುರ್ಗ: ದುರ್ಗವನ್ನಾಳಿದ ರಾಜವೀರ ಮದಕರಿ ಯಾವ ಜಾತಿಗೂ ಸೀಮಿತವಲ್ಲ. ಜಾತ್ಯತೀತ ನಾಯಕ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ ಬಣ್ಣಿಸಿದರು.

ಪಾಳೆಗಾರ ಮದಕರಿನಾಯಕರ ಜಯಂತಿ ಅಂಗವಾಗಿ ಮೆಜೆಸ್ಟಿಕ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ರಾಜ್ಯಾದ್ಯಂತ ನಾಡದೊರೆ ಮದಕರಿನಾಯಕರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಮೊಘಲರ ದಾಳಿ ಸಮರ್ಥವಾಗಿ ಎದುರಿಸಿ, ತನ್ನ ಸುತ್ತಮುತ್ತಲ್ಲಿನ ವೈರಿಗಳನ್ನು ಹಿಮ್ಮೆಟ್ಟಿಸಿದ ಸಾಹಸಿ ಎಂದು ಹೇಳಿದರು.

ಮದಕರಿನಾಯಕ 25 ವರ್ಷ ಆಳ್ವಿಕೆ ನಡೆಸಿ, ಪ್ರಜೆಗಳ ಹಿತಕ್ಕಾಗಿ ಶ್ರಮಿಸಿದ ದೊರೆ. ಯಾವ ತಾರತಮ್ಯವಿಲ್ಲದೆ, ಎಲ್ಲ ಸಮುದಾಯದವರನ್ನು ಸಮನಾಗಿ ಕಂಡು ಉತ್ತಮ ಆಡಳಿತ ನೀಡಿದ್ದನ್ನು ಎಂದಿಗೂ ಮರೆಯುವಂತಿಲ್ಲ ಎಂದರು.

ಪ್ರತಿ ವರ್ಷ ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಜಯಂತಿಯನ್ನು ಈ ಬಾರಿ ಸಾಂಕೇತಿಕವಾಗಿ ಆಚರಿಸಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ವರ್ಷ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಮುಖಂಡರಾದ ಗೋಪಾಲಸ್ವಾಮಿ ನಾಯಕ, ರತ್ನಮ್ಮ, ಸೋಮು, ಕಾಟೇಹಳ್ಳಿ ಕರಿಯಣ್ಣ, ಅಜೇಯ ಮದಕರಿ, ದರ್ಶನ್, ತಿಪ್ಪೇಸ್ವಾಮಿ, ರಾಜ ಮದಕರಿನಾಯಕ, ಕಿರಣ್, ಸಿರುವಲಪ್ಪ, ನಗರಸಭೆ ಮಾಜಿ ಸದಸ್ಯರಾದ ಸಿ.ಟಿ.ರಾಜೇಶ್, ತಿಪ್ಪೇಸ್ವಾಮಿ, ಅಹೋಬಲ ಟಿವಿಎಸ್ ಷೋರೂಂನ ಮಾಲೀಕ ಅರುಣ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net