

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಮೈಸೂರು ಸಂಸ್ಥಾನದ ಮೂವರು ರಾಜರ ಪ್ರತಿಮೆಗಳ ಬಳಿ ಸಿಸಿ ಕ್ಯಾಮರಾ ಅಳವಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ.
ಕೆಲವು ದಿನಗಳ ಹಿಂದೆ ಕೆ.ಆರ್.ವೃತ್ತದಲ್ಲಿರುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ವ್ಯಕ್ತಿಯೊಬ್ಬ ಅವಮಾನ ಮಾಡಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಈ ಕ್ರಮ ತೆಗೆದುಕೊಂಡಿದೆ.
ಕೃಷ್ಣರಾಜ ಒಡೆಯರ್ ವೃತ್ತ, ಚಾಮರಾಜ ಒಡೆಯರ್ ವೃತ್ತ, ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ತಿಳಿಸಿದ್ದಾರೆ.
ಭವಿಷ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದು, ಪಾರಂಪರಿಕ ಸ್ಥಳಗಳ ಬಳಿ ಭದ್ರತೆ ಹೆಚ್ಚಿಸಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಸಿಸಿ ಕ್ಯಾಮರಾಗಳು ಪೊಲೀಸ್ ಕಂಟ್ರೋಲ್ ರೂಂ ಮತ್ತು ಪಾಲಿಕೆ ಕಂಟ್ರೋಲ್ ರೂಂ ಮಾನಿಟರಿಂಗ್ ಮಾಡಲಿವೆ. ಇದರಿಂದ ಶೀಘ್ರವಾಗಿ ಸ್ಪಂದಿಸಲು ಸಾಧ್ಯವಾಗಲಿದೆ. ಈ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಅನುಷ್ಠಾನ ಮಾಡುವುದಾಗಿ ತಿಳಿಸಿದ್ದಾರೆ.
ಸಿಸಿ ಕ್ಯಾಮರಾ ಅಳವಡಿಕೆಯಿಂದ ಎರಡು ಉಪಯೋಗಗಳಿವೆ. ಪ್ರತಿಮೆಗಳ ಬಳಿ ಯಾರಾದರೂ ಅನುಚಿತವಾಗಿ ವರ್ತಿಸಿದರೆ ಅವರನ್ನು ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಮೂರು ವೃತ್ತಗಳಿಗೆ ಮಾತ್ರ ಪಾಲಿಕೆಗೆ ಮುಖ್ಯವಲ್ಲ. ಆದರೆ, ಮೈಸೂರು ರಾಜ ಪರಂಪರೆಯ ಸಂಕೇತವಾಗಿರುವ ಮೂರು ವೃತ್ತಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೂರ ಗ್ರಾಮದ ಶಿವಮೂರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತಿದ್ದ. ಆತ ಮಾನಸಿಕವಾಗಿ ತೊಂದರೆಯಲ್ಲಿದ್ದ ಎಂದು ಪೊಲೀಸರು ಹೇಳಿದ್ದರು. ಈ ಘಟನೆ ಬಳಿಕ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರತಿಮೆಗಳ ಬಳಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದರು.