ರಾಜಣ್ಣ ಕೂಡಲೇ ಶಿವರಾಂ ಕ್ಷಮೆ ಯಾಚಿಸಲಿ: ಬಾಗೆ ಚಾರ್ಲ್ಸ್ ಒತ್ತಾಯ

ರಾಜಣ್ಣ ಕೂಡಲೇ ಶಿವರಾಂ ಕ್ಷಮೆ ಯಾಚಿಸಲಿ: ಬಾಗೆ ಚಾರ್ಲ್ಸ್ ಒತ್ತಾಯ
Published on

ಹಾಸನ: ಮಾಜಿ ಸಚಿವ ಬಿ. ಶಿವರಾಂ ವಿರುದ್ಧ ಏಕವಚನದಲ್ಲಿ ಮಾತನಾಡಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಕೂಡಲೇ ಶಿವರಾಂ ಬಳಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಹೋರಾಟ ಮಾಡುವುದಾಗಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಬಾಗೆ ಚಾರ್ಲ್ಸ್ ಎಚ್ಚರಿಸಿದರು.
ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕೆ.ಎನ್. ರಾಜಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬದಲಾವಣೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ತುಮಕೂರಿಗೆ ಮಾತ್ರ ಸೀಮಿತವಾಗಿದ್ದಾರೆ. ಶಿವರಾಂ ಹಾಗೂ ಶಿವಲಿಂಗೇಗೌಡ ಅವರ ನಡುವಿನ ಗೊಂದಲ ಬಗೆಹರಿಸುವ ಬದಲು ಹಿರಿಯರಾದ ಶಿವರಾಣ ವಿರುದ್ಧ ಮಾತನಾಡಿರುವುದು ಎಷ್ಟು ಸರಿ? ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಜಿಲ್ಲೆಗೆ ಅತಿಥಿಯಂತೆ ಬಂದು ಹೋಗುವ ರಾಜಣ್ಣ ಅವರು ಕಾಯಕರ್ತರು ಮತ್ತು ಮುಂಖಡರನ್ನು ತುಮಾಕೂರಿಗೆ ಬರಲು ಹೇಳಿ ಅಲ್ಲಿಗೆ ಹೋದಾಗ ನೀನು ಯಾರು? ಎಂದು ಕೇಳುತ್ತಾರೆ. ಪಕ್ಷ ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಒಂದೇ ಒಂದು ಕಾಯಕರ್ತರ ಸಭೆ ಕರೆಯಲಾಗದ ರಾಜಣ್ಣ ಅವರಿಂದ ಪಕ್ಷ ಸಂಘಟನೆ ಹೇಗೆ ಸಾಧ್ಯ? ಜಿಲ್ಲಾ ಉಸ್ತುವಾರಿ ಸಚಿವರು ಆದ ಮೇಲೆ ಜಿಲ್ಲಾ ಪಂಚಾಯಿತಿ ಅನುದಾನವನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿ ಕೆಲಸಕ್ಕೆ ಇವತ್ತಿನವರೆಗೂ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕೂಡಲೇ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು. ಏನಾದರೂ ಇವರ ನಾಯಕತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸಿದರೆ ಕಾಂಗ್ರೆಸ್ಸಿಗೆ ಸೋಲು ಖಚಿತ. ಇವರು ಉಸ್ತುವಾರಿ ಸಚಿವರಾದ ಮೇಲೆ ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆ ಮತ್ತು ಸ್ವಜಾತಿ ಪ್ರೇಮ ಮೆರೆಯುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಹಲಸುಲಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಗೌಡ, ಸಾಮಾಜಿಕ ಹೋರಾಟಗಾರ ಬಾಗೆಯ ರಾಜು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net