

ಚಿತ್ರದುರ್ಗ: ನಿಗಮ-ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ವಿರುದ್ಧ ಸಚಿವ ಕೆ.ಎನ್.ರಾಜಣ್ಣ ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಗಮ-ಮಂಡಳಿ ನೇಮಕದಲ್ಲಿ ನನ್ನ ಅಭಿಪ್ರಾಯವನ್ನು ವರಿಷ್ಠರಿಗೆ ತಿಳಿಸಿದ್ದೇನೆ ಎಂದರು.
ಶಾಸಕ ಲಕ್ಷ್ಮಣ ಸವದಿ ಬಿಜೆಪಿ ಸೇರುವುದಿಲ್ಲ, ಅವರು ನನ್ನ ಆತ್ಮೀಯ ಗೆಳೆಯ. ಗುರುವಾರ ರಾತ್ರಿ ದೂರವಾಣಿಯಲ್ಲಿ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ. ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದು ಹೇಳಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ. ಅವರು ಬಂದಾಗ ಕಾಂಗ್ರೆಸ್ ಶಕ್ತಿ ಹೆಚ್ಚಾಗಿಲ್ಲ. ಹಿಂತಿರುಗಿರುವುದರಿಂದ ಶಕ್ತಿ ಕುಗ್ಗಲ್ಲ. ಆಪರೇಷನ್ ಕಮಲದ ಭೀತಿ ನಮಗ್ಯಾರಿಗೂ ಇಲ್ಲ, ರಾಜ್ಯದಲ್ಲಿ 2028ರವರೆಗೆ ಅಧಿಕಾರದಲ್ಲಿರುತ್ತೇವೆ ಎಂದರು.
*ಭದ್ರಾ ಮೇಲ್ದಂಡೆ: ತರೀಕೆರೆ ತಾಲೂಕು ಅಬ್ಬಿನಹೊಳೆ ಬಳಿ 42 ರೈತರ ಪೈಕಿ ಇಬ್ಬರಿಂದ ಸಮಸ್ಯೆ ಆಗಿದೆ. ಅವರ ಮನವೊಲಿಸಲು ತರೀಕೆರೆ ಶಾಸಕ ಶ್ರೀನಿವಾಸ್ ಒಪ್ಪಿದ್ದಾರೆ. ಚಿಕ್ಕಮಗಳೂರು ಡಿಸಿ, ಎಸ್‌ಪಿ ಅವರ ಬಳಿಯೂ ಮಾತನಾಡಿದ್ದೇನೆ. ವೈ-ಜಂಕ್ಷನ್ ಹಾಗೂ ಅಬ್ಬಿನಹೊಳೆ ಬಳಿಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗಲಿದೆ. ಅರಣ್ಯ ಇಲಾಖೆ ಕ್ಲಿಯರೆನ್ಸ್ ಕೂಡ ದೊರೆತಿದೆ. ಅಬ್ಬಿನಹೊಳೆ ಬಳಿ ತರೀಕೆರೆಯ ಹಿಂದಿನ ಶಾಸಕರಿಂದಾಗಿ ಸಮಸ್ಯೆಯಾಗಿತ್ತು ಎಂದು ಹೇಳಿದರು.
ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು, 2024 ಅಕ್ಟೋಬರ್ ಅಂತ್ಯದೊಳಗೆ ಚಿತ್ರದುರ್ಗಕ್ಕೆ ಭದ್ರಾ ನೀರು ಹರಿಸುವುದು ಶೇ.100 ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಯೋಜನೆ ಕಾಮಗಾರಿ ವೀಕ್ಷಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬರಲಿದ್ದಾರೆ. ಜ.28 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತ ಸಮುದಾಯಗಳ ಜಾಗೃತ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಮಿಸುತ್ತಿದ್ದಾರೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಇದ್ದರು.