ರಾಜಣ್ಣ ಅವರೇ ಉಸ್ತುವಾರಿಯಾಗಿ ಮುಂದುವರಿಯಲಿ: ಸಂಸದ ಶ್ರೇಯಸ್ ಪಟೇಲ್ ಆಶಯ

ರಾಜಣ್ಣ ಅವರೇ ಉಸ್ತುವಾರಿಯಾಗಿ ಮುಂದುವರಿಯಲಿ: ಸಂಸದ ಶ್ರೇಯಸ್ ಪಟೇಲ್ ಆಶಯ
Published on

ಹಾಸನ: ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇಡ ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿರುವ ಮಾಹಿತಿ ನನಗಿಲ್ಲ. ನನ್ನ ಗಮನಕ್ಕೆ ಬಂದ ಹಾಗೆ ಅವರು ಹಾಸನ ಉಸ್ತುವಾರಿ ಬೇಡ ಎಂದು ಯಾವತ್ತೂ ಹೇಳಿಲ್ಲ. ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಯಲಿ ಎಂದು ಸಂಸದ ಶ್ರೇಯಸ್ ಪಟೇಲ್ ಆಶಿಸಿದರು.

ನಗರಸಭೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ನಮ್ಮ ಬಳಿ ಆ ರೀತಿ ಹೇಳಿಲ್ಲ. ಉಸ್ತುವಾರಿ ಸಚಿವರು ಬಂದಾಗಿನಿಂದಲೂ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೆಲಸಗಳು ಆಗುತ್ತಿವೆ. ಫ್ಲೈಓವರ್‌ಗೆ ಹಣ ಬಿಡುಗಡೆಗೆ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಕೊಡಿಸಿದರು. ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಿದರು ಎಂದು ತಿಳಿಸಿದರು.

ದಲಿತರ ಸಮಾವೇಶ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷ, ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಪಕ್ಷದ ಹಿತದೃಷ್ಟಿಯಿಂದ ಸಮಾವೇಶ ಮಾಡಬಹುದು. ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಎಷ್ಟು ಸಮಾವೇಶ ಮಾಡಿದರೂ ನಾವು ಒಪ್ಪಿಕೊಳ್ಳಬೇಕು. ನಮ್ಮ ಪಕ್ಷದಲ್ಲಿ ತತ್ವ ಸಿದ್ಧಾಂತದ ಮೇಲೆ ತೀರ್ಮಾನ ಮಾಡುತ್ತಾರೆ. ಪಕ್ಷದ ಅಡಿಯಲ್ಲಿ ಯಾವುದೇ ಸಮಾವೇಶ ನಡೆದರೂ ತಪ್ಪಲ್ಲ. ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಸಮಾವೇಶ ಮಾಡುತ್ತಾರೆ ಎಂದು ಹೇಳಿದರು.

ಹಾಸನ ಸೇರಿ ರಾಜ್ಯದ 9 ವಿವಿ ಮುಚ್ಚುವ ವಿಚಾರವಾಗಿ ಮಾತನಾಡಿ, ಜನರಿಗಾಗಲಿ, ವಿದ್ಯಾರ್ಥಿಗಳಿಗೆ ತೊಂದರೆ ಕೊಡಲ ಈ ತೀರ್ಮಾನ ತೆಗೆದುಕೊಂಡಿಲ್ಲ. ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರ ಬಳಿ ಮಾತನಾಡಿದ್ದೇನೆ. ವಿದ್ಯಾರ್ಥಿಗಳಿಗೆ ತೊಂದರೆ ಆಗಲು ನಾನು ಬಿಡುವುದಿಲ್ಲ. ಸಚಿವರು ಉತ್ತಮ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ. ವಿದ್ಯಾರ್ಥಿಗಳು ಭಯ ಪಡುವುದು ಬೇಡ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬರುವಂತೆ ನಾವ್ಯಾರೂ ನಡೆದುಕೊಳ್ಳಲ್ಲ. ಅನವಶ್ಯಕವಾಗಿ ಹಣ ಪೋಲಾಗುತ್ತಿದೆ. ಹಾಸನ ವಿವಿಯಲ್ಲಿ ಉಪನ್ಯಾಸಕರು, ಸಿಬ್ಬಂದಿ ಕೊರತೆ ಇದೆ ಎಂದು ಸಮಿತಿ ವರದಿ ನೀಡಿದೆ. ಇದೆಲ್ಲವನ್ನು ಗಮನಿಸಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ಜತೆ ನಾನು ಮಾತನಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net