ರಾಜಗುರು ಮಗ್ಗೆ ವೆಂಕಟಕೃಷ್ಣಯ್ಯ ಸ್ಮರಣೆ

WhatsApp Image 2023-09-05 at 1.20.57 PM
Published on

ಮೈಸೂರು: ಮೈಸೂರು ಸಂಸ್ಥಾನದ ರಾಜಗುರು ಮಗ್ಗೆ ವೆಂಕಟಕೃಷ್ಣಯ್ಯ (ತಾತಯ್ಯ) ಅವರ 179ನೇ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
ಮಹಾನಗರಪಾಲಿಕೆ ವತಿಯಿಂದ ನಗರದ ಬಸ್ ನಿಲ್ದಾಣದ ಎದುರಿನ ತಾತಯ್ಯ ಉದ್ಯಾನದಲ್ಲಿರುವ ತಾತಯ್ಯ ಪ್ರತಿಮೆಗೆ ಮೇಯರ್ ಶಿವಕುಮಾರ್, ಶಾಸಕ ಟಿ.ಎಸ್.ಶ್ರೀವತ್ಸ ಪುಷ್ಪಾರ್ಚನೆ ಮಾಡಿದರು.


ಸ್ವಾತಂತ್ರೃ ಪೂರ್ವದಲ್ಲೇ ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷಣ ದೊರೆಯಬೇಕೆಂದು ತಾತಯ್ಯ ಪ್ರತಿಪಾದಿಸಿದ್ದರು. ಮೌಲ್ಯಯುತ ವಾತಾವರಣಕ್ಕೆ ಶಿಕ್ಷಣದ ಅಗತ್ಯವನ್ನು ಮನಗಂಡಿದ್ದರು. ಮಹಾತ್ಮ ಗಾಂಧೀಜಿ ಅವರು ಮೈಸೂರಿಗೆ ಬಂದಾಗ ತಾತಯ್ಯ ಅವರನ್ನು ‘ವೃದ್ಧ ಪಿತಾಮಹ’ಎಂದು ಬಣ್ಣಿಸಿದ್ದರು ಎಂದು ಟಿ.ಎಸ್.ಶ್ರೀವತ್ಸ ತಿಳಿಸಿದರು.


ಶಿಕ್ಷಕರಾಗಿದ್ದ ವೆಂಕಟಕೃಷ್ಣಯ್ಯ ಅವರು ಸುಬ್ಬರಾಯನಕೆರೆ ಪಕ್ಕದಲ್ಲಿ ಕಟ್ಟಿದ ಅನಾಥಾಲಯ ಮತ್ತು ಚಾಮುಂಡಿಪುರಂನಲ್ಲಿ ದಾನ ನೀಡಿದ ಬಾಲಬೋಧಿನಿ ಶಾಲೆಯಲ್ಲಿ ಶಿಕ್ಷಣ ಪಡೆದ ಸಹಸ್ರಾರು ಜನರು ಇಂದು ವಿಶ್ವದ ಅನೇಕ ಕಡೆ ಉನ್ನತ ಸ್ಥಾನದಲ್ಲಿರುವುದು ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಹೆಮ್ಮೆಯ ವಿಚಾರ ಎಂದರು.


ಮೇಯರ್ ಶಿವಕುಮಾರ್ ಮಾತನಾಡಿ, ತಾತಯ್ಯ ಅವರು ಮೈಸೂರಿನಲ್ಲಿ ಶತಮಾನಗಳ ಹಿಂದೆಯೇ ಶಿಕ್ಷಣ ಸಂಸ್ಥೆಗಳು, ಸಹಕಾರ ರಂಗ, ವೈದ್ಯಕೀಯ ಕ್ಷೇತ್ರ, ಕನ್ನಡದ ಪತ್ರಿಕೆಗಳು, ಕಾರ್ಖಾನೆಗಳನ್ನು ಪ್ರಾರಂಭಿಸಲು ಉತ್ತೇಜನ ನೀಡಿದ್ದರು. ತಾಯಯ್ಯ ಅವರ ಆದರ್ಶವನ್ನು ಇಂದಿನ ಯುವಪೀಳಿಗೆ ಪಾಲಿಸಿ ಸೇವಾ ಮನೋಭಾವದೊಂದಿಗೆ ಮುಂದುವರಿಯಲು ಮುಂದಾಗಬೇಕು ಎಂದರು.


ಉಪ ಮೇಯರ್ ಡಾ.ರೂಪಾ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ತಾತಯ್ಯ ಅನಾಥಾಲಯ ಅಧ್ಯಕ್ಷ ಸುಂದರೇಶನ್, ಬಿಜೆಪಿ ಮುಖಂಡರಾದ ಜೋಗಿ ಮಂಜು, ಅಜಯ್ ಶಾಸ್ತ್ರಿ, ಸಚಿನ್, ಚರಣ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net