

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜಕೀಯದಲ್ಲಿ ಬೆಳೆಯಲು ಅವಕಾಶ ಸಾಕಷ್ಟಿದೆ. ಆದರೆ ಬೆಳೆಯುವ ವ್ಯಕ್ತಿಗೆ ಸಹನೆ ಮುಖ್ಯ. ಕಾಂಗ್ರೆಸ್ ಪ್ರತಿಯೊಬ್ಬ ಕಾರ್ಯರ್ತನನ್ನು ಗುರುತಿಸುತ್ತದೆ. ಹೀಗಾಗಿ ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ಸಂಘಟನೆಗೆ ಪಕ್ಷದ ನಾಯಕರ ಸಹಕಾರ, ಮಾರ್ಗದರ್ಶನ ಸದಾ ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ಸಂಘಟನೆ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಹಂತದಲ್ಲೂ ಯುವ ಮುಖಂಡರಿಗೆ ಪ್ರೋತ್ಸಾಹ ನೀಡಲಾಗುವುದು. ಯುವಕರು ಸ್ಥಳೀಯ ಸಮಸ್ಯೆಗಳನ್ನು ಹಿರಿಯರೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ಇದರಿಂದ ನಾಯಕರಾಗಿ ಬೆಳೆಯಲು ಸಾಧ್ಯ ಎಂದರು.
ಮುಂದಿನ ದಿನಗಳಲ್ಲಿ ಎನ್‌ಎಸ್‌ಯುಐ ಸಂಘಟನೆ ಕಾರ್ಯಕರ್ತರು ಜಿಲ್ಲೆಯ ಪ್ರತಿ ಕಾಲೇಜಿನಲ್ಲಿ ಕನಿಷ್ಠ ಶೇ. 50ರಷ್ಟು ಸದಸ್ಯತ್ವ ಮಾಡಿಸಬೇಕು. ಜತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಆಗಿರುವ ಸಮಸ್ಯೆ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಸಿದಾಗಲೇ ಯುವಕರನ್ನು ಪಕ್ಷದತ್ತ ಸೆಳೆಯಲು ಸಾಧ್ಯ ಎಂದರು.
ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಯುವ ಕಾಂಗ್ರೆಸ್‌ನವರಿಗೆ ಅವಕಾಶ ಸಿಗುತ್ತದೆ. ಪಕ್ಷ ಸಂಘಟನೆಗೆ ಸರ್ಕಾರದ ಯೋಜನೆ ಪ್ರಚಾರ ಮಾಡಬೇಕು. ಯಾರೂ ಹೊಂದಾಣಿಕೆ ರಾಜಕಾರಣ ಮಾಡಬಾರದು. ಪ್ರಸ್ತುತ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆಯಲಾಗಿದೆ. ಇದೇ ಅವಕಾಶ ಬಳಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲುವಂತೆ ಮಾಡಬೇಕು ಎಂದರು.
ಯುವ ಮುಖಂಡ ವಿನೋದ ಅಸೋಟಿ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯುವಕರಿಗೆ ಆದ್ಯತೆ ನೀಡಬೇಕು. ಯುವಕರು ಬೆಳೆದರೆ ಪಕ್ಷ ಬೆಳೆಯುತ್ತದೆ. ಸ್ಥಳೀಯ ಯುವಕರಿಗೆ ಸರ್ಕಾರದಲ್ಲಿ ನಾಮನಿರ್ದೇಶನ ಮಾಡಬೇಕು. ಜಿಲ್ಲೆಯಲ್ಲಿ 29 ಜಿಪಂ ಕ್ಷೇತ್ರದಲ್ಲಿ ಕನಿಷ್ಠ 4-5 ಸ್ಥಾನದಲ್ಲಿ ಯುವಕರಿಗೆ ಟಿಕೆಟ್ ನೀಡಬೇಕು ಎಂದರು.
ಮುಖಂಡರಾದ ದೀಪಕ ಚಿಂಚೋರೆ, ರಜತ ಉಳ್ಳಾಗಡ್ಡಿಮಠ ಮಾತನಾಡಿದರು. ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಇಮ್ರಾನ ಯಲಿಗಾರ, ಸುವರ್ಣಾ ಕಲ್ಲಕುಂಟ್ಲಾ, ಅಕ್ಷಯ ಪಾಟೀಲ, ಇಸ್ಮಾಯಿಲ್ ತಮಟಗಾರ, ಅರವಿಂದ ಏಗನಗೌಡರ, ರೋಹಿತ ಘೋಡಕೆ ಇತರರು ಇದ್ದರು.