

ಮೈಸೂರು: ರಾಜಕೀಯಕ್ಕಿಂತ ನನಗೆ ಚಳವಳಿಯೇ ಮುಖ್ಯವಾಗಿದ್ದು, ನನ್ನ ಮೊದಲ ಆದ್ಯತೆ ಚಳವಳಿ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಾಸಕರಾದ ಬಳಿಕ ನಿಮಗೆ ಚಳವಳಿ ಮುಖ್ಯವೋ, ರಾಜಕೀಯ ಮುಖ್ಯವೋ ಎಂದು ಹಲವರು ಕೇಳುತ್ತಿದ್ದಾರೆ. ಆದರೆ ರೈತರ ಹಿತಕ್ಕಾಗಿ ನನ್ನ ತಂದೆ ಹಾದಿಯಲ್ಲಿ ನಡೆದು ಕೆಲಸ ಮಾಡುವ ನನಗೆ ಚಳವಳಿಯೇ ಮುಖ್ಯ. ರಾಜಕೀಯಕ್ಕಿಂತ ಚಳವಳಿಗೆ ಮೊದಲ ಅದ್ಯತೆ ನೀಡುತ್ತೇನೆ ಎಂದರು.
ರೈತ ಸಂಘ ಆರಂಭವಾಗಿ 41 ವರ್ಷಗಳಾಗಿವೆ. ರಾಜ್ಯದ ಅನೇಕ ಕಡೆಗಳಿಂದ ಚಳವಳಿಗಾರರು ಬಂದು ನನ್ನ ಪರ ಪ್ರಚಾರ ಮಾಡಿದ್ದಲ್ಲದೇ ಚುನಾವಣಾ ವೆಚ್ಚಕ್ಕಾಗಿ ಹಣವನ್ನೂ ನೀಡಿ ಪ್ರೀತಿಯಿಂದ ಕಂಡಿದ್ದಾರೆ. ದಲಿತ ಸಂಘರ್ಷ ಸಮಿತಿ, ರೈತ ಸಂಘ ಮತ್ತು ಅನೇಕ ಪ್ರಗತಿಪರ ಸಂಘಟನೆಗಳು ನನ್ನ ಗೆಲುವಿಗೆ ಸಹಕಾರಿಯಾಗಿವೆ. ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಸಾಕಷ್ಟು ತಪ್ಪುಗಳಿಂದ ಸೋತಿದ್ದೆ. ಆದರೆ ಈ ಬಾರಿ ಆ ತಪ್ಪುಗಳನ್ನು ಸರಿಪಡಿಸಿಕೊಂಡಿರುವುದು ಗೆಲುವಿಗೆ ಕಾರಣವಾಗಿದೆ. ಇನ್ನೂ ರಾಜಕೀಯಲ್ಲಿ ಕಲಿಯುವುದು ಸಾಕಷ್ಟಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಲುಷಿತಗೊಂಡಿರುವ ರಾಜಕೀಯದ ಇಂತಹ ಕಾಲಘಟ್ಟದಲ್ಲೂ ಚಳವಳಿ ಕುಟುಂಬದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಿರುವ ಮೇಲುಕೋಟೆ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸುವೆ. ಚುನಾವಣೆ ಎಂದರೆ ಹಣ ಬಲ, ತೋಳ್ಬಲ ಎನ್ನುವ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಸಂಘ ಪ್ರಬಲವಾಗಿದ್ದಾಗ ನಮ್ಮ ಕೂಗು, ಬರಹಗಳು ವಿಧಾನಸೌಧವನ್ನು ತಲುಪುತ್ತಿತ್ತು. ಅವುಗಳ ಆಧಾರ ಮೇಲೆ ಸರ್ಕಾರದ ನೀತಿ ನಿರೂಪಣೆಗಳು ನಡೆಯುತ್ತಿದ್ದವು. ಯಾವಾಗ ವಿಶ್ವ ವ್ಯಾಪಾರ ಸಂಸ್ಥೆಯ ಜತೆಗೆ ಒಪ್ಪಂದವಾಯಿತೋ ಆ ನಂತರ ಬಂಡವಾಳಶಾಹಿತನ, ಅನೀತಿ ರಾಜಕೀಯ, ಸುಳ್ಳು ವಿಜೃಂಭಿಸಲಾರಂಭಿಸುತ್ತಿವೆ. ರೈತರಿಗೆ ಮನ್ನಣೆಯೇ ಇಲ್ಲದಂತಾಗಿದೆ ಎಂದರು.
ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಹಸಿರು ಶಾಲು ಹಾಕಿ, ಮೈಸೂರು ಪೇಟ, ಪುಸ್ತಕ ಮತ್ತು ನೇಗಿಲು ನೀಡುವ ಮೂಲಕ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ವಿಮರ್ಶಕ ಜಿ.ಎಚ್.ನಾಯಕ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ರೈತ ಮುಖಂಡರಾದ ಹೊಸೂರು ಕುಮಾರ್, ಪ್ರಸನ್ನ ಎನ್.ಗೌಡ, ಅಶ್ವತ್ಥ ನಾರಾಯಣರಾಜೇ ಅರಸ್, ರವಿಕಿರಣ್ ಪೂಣಚ್ಚ, ಮಧುಚಂದನ್, ನೇತ್ರಾವತಿ, ಮನುಸೋಮಯ್ಯ, ತಗ್ಗಳ್ಳಿ ಪ್ರಸನ್ನ, ಶಂಭುಲಿಂಗ ಸ್ವಾಮಿ, ಸೃಜನ್ ಬೋಪಯ್ಯ, ಸಂತೋಷ್, ಹೊಸಳ್ಳಿ ಶಿವು, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ದಸಂಸ ಮುಖಂಡರಾದ ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ಚೋರನಹಳ್ಳಿ ಶಿವಣ್ಣ ಇತರರು ಇದ್ದರು.