

ಮಧುಗಿರಿ: ರಾಜಕೀಯ ಲಾಭಕ್ಕಾಗಿ ಮತಗಳಿಸುವ ಭರದಲ್ಲಿ ಜಾತಿ, ಮತಗಳ ನಡುವೆ ಕಂದಕ ನಿಮಾರ್ಣ ಮಾಡಿ ಸಮಾಜದ ಸ್ವಾಸ್ಥ$್ಯ ಕದಡಿಸಬಾರದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಮಧುಗಿರಿಯ ಶ್ರೀದಂಡಿನಮಾರಮ್ಮ ಜಾತ್ರೆ ಪ್ರಯಕ್ತ ಬುಧವಾರ ರಾತ್ರಿ ದೇವಸ್ಥಾನದಿಂದ ನಡೆದ ಬೆಳ್ಳಿಪಲ್ಲಕ್ಕಿ ಉತ್ಸವ, ಸಿಡಿಮದ್ದು ಪ್ರದರ್ಶನ ಮತ್ತು ಉತ್ತಮ ರಾಸುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಅವರವರ ಧರ್ಮ ಗ್ರಂಥಗಳನ್ನು ಅಭ್ಯಸಿಸಿ, ಅದರ ಅಂತರಾರ್ಥವನ್ನು ತಿಳಿದು ಯಾರಿಗೂ ನೋವುಂಟು ಮಾಡದೇ ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆ, ಗೌರವಗಳಿಂದ ಬದುಕಿ. ದೇವರನ್ನು ನಂಬಿ ಅದು ಅಭ್ಯುದಯಕ್ಕೆ ನೆರವಾಗುತ್ತದೆ ಪರಸ್ಪರರಲ್ಲಿ ಹೃದಯ ಶ್ರೀಮಂತಿಕೆ ಬೆಳಸಿಕೊಂಡು ಸೌಹಾರ್ದಯುತವಾಗಿ ಜೀವನ ನಡೆಸಬೇಕು ಎಂದರು.
ಗುಡಿಸಲುಮುಕ್ತ ಮಧುಗಿರಿ ಕ್ಷೇತ್ರದ ಗುರಿ: ಮಧುಗಿರಿ ಕ್ಷೇತ್ರವನ್ನು ಗುಡಿಸಲುರಹಿತ ಕ್ಷೇತ್ರ ಮಾಡುವ ಗುರಿ ಹೊಂದಲಾಗಿದ್ದು, 2013-&18ರ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ತಾಲೂಕಿನಲ್ಲಿ ಸೂರಿಲ್ಲದ ಎಲ್ಲ ಜಾತಿಯ ಬಡವರನ್ನು ಗುರುತಿಸಿ 16,400 ಮನೆಗಳನ್ನು ನಿರ್ಮಿಸಿ ಕೊಡಲಾಗಿತ್ತು. ಅದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಮನೆ ಕಟ್ಟಲು ಸಾಧ್ಯವಾಗಿಲ್ಲ. ಬಿಜೆಪಿಗರದ್ದು ಸುಳ್ಳಿನ ಸರ್ಕಾರ ಎಂದು ಆರೋಪಿಸಿದ ಸಚಿವ ರಾಜಣ್ಣ, ಇನ್ನೂ ಒಂದು ವರ್ಷದೊಳಗೆ ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನ ಕೆರೆಗಳಿಗೆ ಎತ್ತಿನ ಹೊಳೆ ಯೋಜನೆ ನೀರು ಹರಿಸಲಾಗುವುದು. ಇಲ್ಲಿನ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸಲು ಟೆಂಡರ್ ಪ್ರಕ್ರಿಯೇ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಲಾಗುವುದು ಎಂದು ರಾಜಣ್ಣ ಭರವಸೆ ನೀಡಿದರು.