ರಾಜಕೀಯಕ್ಕಾಗಿ ಭಾಷಾ ವಿವಾದ ಸೃಷ್ಟಿ-ಸಂಸದ ಡಾ.ಜಿ.ಎಂ.ಸಿದ್ದೇಶ್ವರ

karave.jpg
Published on

ದಾವಣಗೆರೆ: ಭಾಷೆ ಹೆಸರಿನಲ್ಲಿ ವಿವಾದಗಳು ನಿಜವಾಗಿಯೂ ಇಲ್ಲ. ಕೆಲವು ರಾಜ್ಯಗಳ ರಾಜಕಾರಣಿಗಳು ಚುನಾವಣಾ ರಾಜಕೀಯಕ್ಕಾಗಿ ಈ ಕ್ಯಾತೆ ತೆಗೆದು ಜನರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿಷಾದ ವ್ಯಕ್ತಪಡಿಸಿದರು.

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶನಿವಾರ ರಾತ್ರಿ ಶಿವಯೋಗಿಮಂದಿರದಲ್ಲಿ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಹಾಸ್ಯಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಡಿ, ಭಾಷಾ ವಿವಾದಗಳು ಚುನಾವಣೆ ಬಂದಾಗಷ್ಟೇ ತಾರಕಕ್ಕೇರಲಿದ್ದು, ಚುನಾವಣೆ ಮುಗಿದ ನಂತರ ತಣ್ಣಗಾಗುತ್ತವೆ. ಭಾಷಾ ವಿವಾದ ಹುಟ್ಟುಹಾಕಿ ಜನರನ್ನು ಪ್ರಚೋದಿಸುವುದು ಸರಿಯಲ್ಲ. ಜನರೂ ಕೂಡ ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದರು. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಅನ್ಯ ಭಾಷಿಕರ ಪ್ರಭಾವ ಹೆಚ್ಚಿದೆ. ಆದರೆ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಕನ್ನಡವೇ ಪ್ರಧಾನವಾಗಿದೆ. ಈ ಹೋರಾಟದ ನೆಲದಲ್ಲಿ ಕನ್ನಡ ಪರ ಸಂಘಟನೆಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದರು. ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ, ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಕಲಿಯುವುದು ಕಡ್ಡಾಯವಾಗಬೇಕು. ಆಗ ಜನರ ಮಧ್ಯೆ ಯಾವುದೇ ಜಗಳವೂ ಇರುವುದಿಲ್ಲ. ದೇಶದಲ್ಲಿ ಎಲ್ಲೇ ಭಾಷೆಗೆ ಸಂಬಂಧಿಸಿದಂತೆ ತೊಡಕುಗಳಿದ್ದರೆ ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಸೌಹಾರ್ದಯುತವಾಗಿ ಪರಿಹರಿಸಬೇಕು ಎಂದು ಹೇಳಿದರು. ಉದ್ಯಾನವನ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಎಂ.ಸೋಮಶೇಖರಪ್ಪ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಜಿ.ಯಲ್ಲಪ್ಪ, ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ, ಪತ್ರಕರ್ತ ನಾಗರಾಜ್ ಬಡದಾಳ್, ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಕಾಂಗ್ರೆಸ್ ಮುಖಂಡರಾದ ಸಾದಿಕ್ ಪೈಲ್ವಾನ್, ಸಿರಾಜ್ ಅಹ್ಮದ್, ಸೈಯದ್ ರಿಯಾಜ್, ಬಾಷಾ ಪೈಲ್ವಾನ್, ಜಿ.ವಿ.ಗಂಗಾಧರ್, ಅಂಬಿಕಾ ಚಂದ್ರಶೇಖರ್, ಸೋಮಲಾಪುರ ಹನುಮಂತಪ್ಪ, ಜಿ.ಎಸ್.ಶ್ಯಾಮ್, ಸಮೀರ್, ದಿನೇಶ್ ಶೆಟ್ಟಿ, ಪ್ರವೀಣ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net