

ಮೈಸೂರು: ಭಾರತ್ ಜೋಡೋ ಯಾತ್ರೆಯಿಂದ ರಾಜಕೀಯ ಲಾಭವಾಗುತ್ತದೆ ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಇಷ್ಟು ವರ್ಷ ಜನರನ್ನು ಭ್ರಮೆಯಲ್ಲಿ ಇರಿಸಿದ್ದ ಕಾಂಗ್ರೆಸ್ ಏನೆಂಬುದು ಜನರಿಗೆ ತಿಳಿದಿದ್ದು, ಮುಂದಿನ ಚುನಾವಣೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಪ್ರಧಾನಿ ನರೇಂದ್ರಮೋದಿ ಜನ್ಮದಿನದ ಅಂಗವಾಗಿ ಕೆ.ಆರ್.ಕ್ಷೇತ್ರದಲ್ಲಿ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ಆಯೋಜಿಸಿರುವ ‘ಮೋದಿ ಯುಗ ಉತ್ಸವ’ದಲ್ಲಿ ಸೋಮವಾರ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ರಾಹುಲ್‌ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಿಂದ ರಾಜಕೀಯ ಲಾಭವಾಗುತ್ತದೆ ಎನ್ನುವ ಭ್ರಮೆಯಲ್ಲಿದ್ದಾರೆ. ಅವರು ಭ್ರಮೆಯಲ್ಲಿ ಇರುವುದನ್ನು ಯಾಕೆ ಬೇಡ ಎನ್ನೋಣ ಎಂದರು.
ಕಾಂಗ್ರೆಸ್ ದೇಶದ ಬಗ್ಗೆ ಚಿಂತನೆ ಮಾಡಿಲ್ಲ. ನಕಲಿ ಗಾಂಧಿ ಕುಟುಂಬದ ಬಗ್ಗೆ ಮಾತ್ರ ಚಿಂತನೆ ಮಾಡುವ ಕಾಂಗ್ರೆಸ್ಸಿಗರಿಗೆ ದೇಶದ ಬಗ್ಗೆ ಏನು ಗೊತ್ತು? ಹೀಗಾಗಿ ಕಾಂಗ್ರೆಸ್ ಏನು ಮಾಡುತ್ತಿದೆ ಎನ್ನುವುದು ದೇಶದ ಜನರಿಗೆ ಗೊತ್ತಿದೆ ಎಂದು ಹೇಳಿದರು.
ಭಾರತ್ ಜೋಡೋ ಮಾಡುವವರು ಮೊದಲು ಭಾರತ್ ಥೋಡೋ ಅನ್ನುವ ಪಾದ್ರಿಯನ್ನು ಭೇಟಿ ಮಾಡಿದ್ದು ನಾಚಿಕೆಗೇಡು. ತಮಿಳುನಾಡಿನ ಈ ಪಾದ್ರಿ ದೇಶದ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ್ದು, ನಿಮ್ಮ ನಾಯಕರು ಹೋಗಿ ಅಂಥವರನ್ನು ಭೇಟಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶವನ್ನೇ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕನೊಬ್ಬ ಪಾಕಿಸ್ತಾನಕ್ಕೆ ಬೆಂಬಲ ನೀಡಿ ಮಾತನಾಡುತ್ತಾರೆಂದರೆ ಇವರ ಮನಸ್ಸಿನಲ್ಲಿ ಏನಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ರಾಹುಲ್‌ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಜೈಲಿನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ತಪ್ಪು ಮಾಡಿರುವುದರಿಂದಲೇ ಅವರಿಗೆ ಜೈಲಿನ ಭಯ ಶುರುವಾಗಿದೆ ಎಂದರು.
ದೇಶಕ್ಕೆ ಸುರಕ್ಷತೆ ಕೊಡುತ್ತೇವೆಂದು ಹಲವರು ಹೇಳಿದ್ದರು. ಆದರೆ ಅದನ್ನು ನರೇಂದ್ರಮೋದಿ ಅವರು ಅಕ್ಷರಶಃ ಮಾಡಿ ತೋರಿಸಿದ್ದಾರೆ. ಹಿಂದೆ ಅಗುತ್ತಿದ್ದ ಬಾಂಬ್ ಸ್ಫೋಟ, ಭಯೋತ್ಪಾದನೆ ಕೃತ್ಯಗಳು ಈಗಿಲ್ಲ. ಭಾರತವನ್ನು ಕೆಣಕಿದ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಲಾಗಿದೆ. ದೇಶದ ಐಕ್ಯತೆಗಾಗಿ ಸ್ವಾತಂತ್ರೃ ಬಂದಾಗಲೂ ಹಾರಾಡದಷ್ಟು ತ್ರಿವರ್ಣ ಧ್ವಜಗಳು ಮನೆ, ಮನೆ ಮೇಲೆ ಹಾರಾಡಿವೆ ಎಂದು ಹೇಳಿದರು.