ರಾಜಕೀಯ ಲಾಭಕ್ಕಾಗಿ ಹಿಜಾಬ್ ನಿಷೇಧ ವಾಪಸ್ ಹೇಳಿಕೆ:ಸಚಿವ ಎನ್. ಮಹೇಶ್ ಆಕ್ರೋಶ

ರಾಜಕೀಯ ಲಾಭಕ್ಕಾಗಿ ಹಿಜಾಬ್ ನಿಷೇಧ ವಾಪಸ್ ಹೇಳಿಕೆ:ಸಚಿವ ಎನ್. ಮಹೇಶ್ ಆಕ್ರೋಶ
Published on

ಹಾಸನ: ಹಿಜಾಬ್ ವಿವಾದ ನ್ಯಾಯಾಲಯದಲ್ಲಿದ್ದು, ತೀರ್ಪು ಬರುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಷಡ್ಯಂತ್ರದಿಂದ ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಮಾಚಿ ಸಚಿವ ಎನ್.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಿಜಾಬ್ ನಿಷೇಧ ಮಾಡಿಲ್ಲ. ಹಿಜಾಬ್ ಮತ್ತು ಬುರ್ಕಾ ತೆಗೆಯುವುದು ನಮ್ಮ ಹೋರಾಟ ಅಲ್ಲ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಬರುವ ಮೊದಲೇ ಈ ರೀತಿ ಹೇಳಿಕೆ ನೀಡಿರುವುದು ನಿಜಕ್ಕೂ ಖಂಡನೀಯ. ರಾಜಕೀಯ ಲಾಭ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದು, ಇದರಿಂದ ಯಾವುದೇ ಕಾರಣಕ್ಕೂ ಅವರಿಗೆ ಅನುಕೂಲವಾಗುವುದಿಲ್ಲ. ನ್ಯಾಯಾಲಯ ಯಾವ ತೀರ್ಮಾನ ನೀಡುತ್ತದೆ. ಅದಕ್ಕೆ ನಾವೆಲ್ಲರೂ ಬದ್ಧವಾಗಿರುತ್ತೇವೆ ಎಂದರು.
ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಆರ್ಥಿಕ, ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳಿಗೆ ಮೀಸಲಿಟ್ಟಿರುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು ಇದರ ಬಗ್ಗೆ ಜನಾಂದೋಲನ ಮೂಡಿಸುವ ದೃಷ್ಟಿಯಿಂದ ಹಾಸನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗ್ಯಾರೆಂಟಿ ಯೋಜನೆಗಾಗಿ ನಮಗೆ ನಿಗದಿಪಡಿಸಿದ್ದ 30 ಸಾವಿರ ಕೋಟಿ ಅನುದಾನದಲ್ಲಿ 11,144 ಕೋಟಿ ಹಣವನ್ನ ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ತೀವ್ರ ಅನ್ಯಾಯ ಮಾಡಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗಾಗಿ ನಮ್ಮನ್ನ ಬಲಿ ಕೊಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿಸಿದ 7ಅಭಿವೃದ್ಧಿ ನಿಗಮಗಳಿಗೆ ಸರಿಯಾಗಿ ಅನುದಾನ ಬಿಡುಗಡೆ ಮಾಡಿಲ್ಲ. ಗಂಗಾ ಕಲ್ಯಾಣ, ಭೂಮಿ ಖರೀದಿ ಮತ್ತು ಇನ್ನಿತರೆ ಕಾರ್ಯಕ್ರಮಗಳಿಗೆ ಅನುದಾನವಿಲ್ಲದೆ ನಮ್ಮ ಜನಾಂಗದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net