

ಹೊಸಕೋಟೆ: ಕರೊನಾ ಸೋಂಕು ಎರಡು ತಿಂಗಳ ಹಿಂದೆ ವ್ಯಾಪಕವಾಗಿ ಹರಡುತ್ತಿದ್ದಾಗ ಮನೆಯಿಂದ ಹೊರಬಂದು ಜನಸೇವೆ ಮಾಡದೆ ಎಲ್ಲಿ ಹೋಗಿದ್ದಿರಿ?, ಈಗ ತಾಲೂಕಿಗೆ ಬಂದು ತಪ್ಪು ಸಂದೇಶ ನೀಡುವ ಕೆಳಹಂತದ ರಾಜಕೀಯ ಮಾಡುತ್ತಿರುವ ಉದ್ದೇಶವಾದರೂ ಏನು ಎಂದು ಶಾಸಕ ಶರತ್ ಬಚ್ಚೇಗೌಡ ಯಾರ ಹೆಸರು ಪ್ರಸ್ತಾಪಿಸದೆ ಸಚಿವ ಎಂಟಿಬಿ ನಾಗರಾಜ್ ಅವರನ್ನು ಪ್ರಶ್ನಿಸಿದರು.
ಅನುಗೊಂಡನಹಳ್ಳಿ ಹೋಬಳಿಯಲ್ಲಿ ಬುಧವಾರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಕರೊನಾ ವಾರಿಯರ್ಸ್‌ಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ಜನಸೇವೆ ಮಾಡಲಿ ಎಂದು ಸಿಎಂ ಅವರು ಕೋಲಾರ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದರು. ಆದರೆ, ಅದನ್ನು ಧಿಕ್ಕರಿಸಿದ್ದು ಏಕೆ?, ರಾಜ್ಯದ ಸಚಿವರಾಗಿ ಕರೊನಾ ಸಂದರ್ಭದಲ್ಲಿ ಎಷ್ಟು ಜಿಲ್ಲೆಗಳಿಗೆ ಭೇಟಿ ಕೊಟ್ಟು, ಪರಿಹಾರ ಒದಗಿಸಿದ್ದೀರಿ?, ಈ ಬಗ್ಗೆ ದಯವಿಟ್ಟು ರಾಜ್ಯದ ಜನರಿಗೆ ಮಾಹಿತಿ ನೀಡಿ ಎಂದರು.
ತಾಲೂಕಿನಲ್ಲಿ ಕರೊನಾ ಸೊಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ, ಆಮ್ಲಜನಕ ಪೂರೈಕೆ ಯಂತ್ರ, ವೆಂಟಿಲೇಟರ್‌ಗಳನ್ನು ವೈಯಕ್ತಿಕವಾಗಿ ಹಾಗೂ ದಾನಿಗಳ ಸಹಾಯದಿಂದ ವಿತರಿಸಿ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ಪ್ರತಿದಿನ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರ ಸೇವೆ ಮಾಡುತ್ತಿದ್ದೇನೆ. ಆದರೂ ರಾಜಕೀಯ ಉದ್ದೇಶಕ್ಕಾಗಿ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಮೂಲಕ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡ ಭೋದನ ಹೊಸಳ್ಳಿ ಪ್ರಕಾಶ್ ಮಾತನಾಡಿ, ರಾಜ್ಯಕ್ಕೆ ಮಾದರಿಯಾದ ಫೀವರ್ ಕ್ಲಿನಿಕ್ ಸ್ಥಾಪಿಸಿ, ತಾಲೂಕಿನ ಪ್ರತಿ ಗ್ರಾಮಗಳಿಗೆ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿ ತಪಾಸಣೆ ಮಾಡುವಲ್ಲಿ ಶಾಸಕರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದರು.
ಅವರೇನು ಮಾಡಿದ್ದಾರೆಂದು ಗೊತ್ತಿದೆ...: ನನ್ನ ಹಾಗೂ ನಮ್ಮ ತಂದೆ ಅವರ ಸಾಧನೆ ಬಗ್ಗೆ ಸುದ್ದಿಗಾರರ ಎದುರು ಎಂಟಿಬಿ ನಾಗರಾಜ್ ಪ್ರಶ್ನಿಸಿದ್ದಾರೆ. ಇಂಥವರು ಮೊದಲು ತಾಲೂಕಿನ ಎಷ್ಟು ರೈತರಿಗೆ ಸಾಗುವಳಿ ಜಮೀನು ಕೊಡಿಸಿದ್ದಾರೆ ತಿಳಿಸಲಿ. ಒಂದು ಪಕ್ಷದಲ್ಲಿದ್ದು ಮತ್ತೊಂದು ಪಕ್ಷದ ಬಾಗಿಲು ಬಡಿಯುವ ಪ್ರವೃತ್ತಿ ಹೊಂದಿರುವ ಅವರು ತಾಲೂಕಿನ ಜನತೆಗೆ ಮೋಸ ಮಾಡಿ ಅಜ್ಞಾತ ಸ್ಥಳಕ್ಕೆ ಹೋದವರು. ಯಾವ ನೈತಿಕತೆಯಿಂದ ಕ್ಷೇತ್ರದ ಜನರಿಂದ ಆರಿಸಿ ಬಂದವರನ್ನೇ ಪ್ರಶ್ನಿಸುತ್ತಾರೆ? ಅವರು ಏನು ಮಾಡಿದ್ದಾರೆಂಬ ಮಾಹಿತಿ ನಮಗೂ ಇದೆ ಎಂದು ಶರತ್ ಬಚ್ಚೇಗೌಡ ಹೇಳಿದರು.