

ಬೆಂಗಳೂರು ಗ್ರಾಮಾಂತರ: ಕರೊನಾ ಕಾರಣದಿಂದ ಸಾವು ಬದುಕಿನ ಹೋರಾಟ ನಡೆಯುತ್ತಿರುವ ಇಂಥ ಸಂದರ್ಭದಲ್ಲಿ ರಾಜಕೀಯ ಬದಿಗೊತ್ತಬೇಕು. ಜನಸೇವೆಗೆ ದೊರಕಿರುವ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿಕೊಳ್ಳಬೇಕು ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ನಗರದ ಭಾರತ್‌ಮಾತಾ ವಿದ್ಯಾಮಂದಿರದ ಸೇರಿ ವಿವಿಧ ಶಾಲೆಗಳ 300 ಶಿಕ್ಷಕರಿಗೆ ಹಾಗೂ ಮಡಿವಾಳ ಸಮುದಾಯದವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಇಂಥ ಸಂದರ್ಭದಲ್ಲಿ ನಿರ್ಗತಿಕರು, ಕೂಲಿಕಾರ್ಮಿಕರು ಬಡವರ ಸಂಕಷ್ಟಕ್ಕೆ ಸಾಧ್ಯವಾದ ಸಹಾಯ ಮಾಡಬೇಕು. ಈ ನಿಟ್ಟಿನಲ್ಲೇ ನಾನು ನನ್ನ ಸೇವೆ ಮುಂದುವರಿಸಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿನ ಎಲ್ಲ ಆಗುಹೋಗುಗಳನ್ನು ಕೇಂದ್ರದ ಮುಖಂಡರು ಗಮನಿಸಿರುತ್ತಾರೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧರಾಗಿರಬೇಕು. ಪಕ್ಷಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಪ್ರತಿ ಶಾಸಕ ಹಾಗೂ ಸಚಿವರ ಕರ್ತವ್ಯವಾಗಿದೆ. ಈ ಬಗ್ಗೆ ಪರ ವಿರೋಧದ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.
ಸರ್ಕಾರಕ್ಕೆ ಪ್ರಸ್ತಾವನೆ: ಕರೊನಾ ಕಾರಣದಿಂದ ಉದ್ಯೋಗ ಕಳೆದುಕೊಂಡಿರುವ ಹಾಗೂ ಅರೆ ವೇತನ ಪಡೆಯುತ್ತಿರುವ ಖಾಸಗಿ ಹಾಗೂ ಅನುದಾನಿತ ಶಾಲೆ ಶಿಕ್ಷಕ ವರ್ಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇವರ ನೆರವಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪುನರುಚ್ಚರಿಸಿದರು.
ಕರೊನಾ ಮೊದಲ ಅಲೆ ಹಾಗೂ ಎರಡನೇ ಅಲೆ ಕಾರಣದಿಂದ ಶಾಲೆಗಳು ಬಂದ್ ಆಗಿವೆ. ಹಲವು ಶಾಲೆಗಳಲ್ಲಿ ಶಿಕ್ಷಕರಿಗೆ ಅರೆ ವೇತನ ನೀಡಲಾಗಿದೆ. ಮತ್ತೆ ಕೆಲವು ಶಾಲೆಗಳ ಶಿಕ್ಷಕರು ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ವಿದ್ಯೆ ಕಲಿಸಿ ಮಕ್ಕಳ ಭವಿಷ್ಯ ರೂಪಿಸಿರುವ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿರುವಾಗ ಅವರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವುಕತೆ ವ್ಯಕ್ತಪಡಿಸಿದರು.
ಬುಧವಾರ ನಗರದ ಹಲವು ಶಾಲೆ ಶಿಕ್ಷಕರಿಗೆ ಆಹಾರ ಕಿಟ್, ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಪರಿಕರ ವಿತರಿಸಲಾಗಿದೆ. ನಾಳೆಯಿಂದ ಹೋಬಳಿವಾರು ಎಲ್ಲ ಖಾಸಗಿ ಹಾಗೂ ಅನುದಾನಿತ ಶಾಲೆ ಶಿಕ್ಷಕರಿಗೂ ಆಹಾರ ಕಿಟ್ ವಿತರಣೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕೂಲಿ ಮಾಡಲು ಆಗಲ್ಲ: ಶಿಕ್ಷಣ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಬೇಕೆಂಬ ಮಹಾದಾಸೆಯಿಂದ ಟೀಚರ್ ತರಬೇತಿ ಪಡೆದು ಶಿಕ್ಷಕರಾಗಿದ್ದಾರೆ. ಇಂಥವರು ಕೂಲಿ ಮಾಡುವುದು ಮತ್ತಿತರ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು ಕಷ್ಟಸಾಧ್ಯ. ವಿದ್ಯಾವಂತರಾಗಿ ಮಕ್ಕಳಿಗೆ ವಿದ್ಯಾದಾನ ಮಾಡುವ ಗುರುಗಳಿಗೆ ಗೌರವ ವಂದನೆ ಸಲ್ಲಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಹೊಸಕೋಟೆ ಭಾರತ್‌ಮಾತಾ ವಿದ್ಯಾಮಂದಿರದ ಸೇರಿ ವಿವಿಧ ಶಾಲೆಗಳ 300 ಶಿಕ್ಷಕರಿಗೆ ಹಾಗೂ ಮಡಿವಾಳ ಸಮುದಾಯದವರಿಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಆಹಾರ ಕಿಟ್ ವಿತರಿಸಿದರು. ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್ ಮತ್ತಿತರರು ಇದ್ದರು.