ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಡೋಣ

Let's fight for political representation
ಮುದ್ದೇಬಿಹಾಳ ಪ್ರವಾಸಿಮಂದಿರದಲ್ಲಿ ಮಾದಿಗ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ತಾಲೂಕಿನ ವಿವಿಧ ಗ್ರಾಪಂಗಳಿಗೆ ಆಯ್ಕೆಯಾದ ನೂತನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಮಾದಿಗ ದಂಡೋರಾ ಹೋರಾಟ ಸಮಿತಿ ತಾಲೂಕಾಧ್ಯಕ್ಷ ತಿಪ್ಪಣ್ಣ ದೊಡಮನಿ, ವಕೀಲರಾದ ಕೆ.ಬಿ. ದೊಡಮನಿ, ಎಸ್.ಎಚ್. ಲೊಟಗೇರಿ, ಡಿ.ಬಿ. ಮುದೂರ, ಯಲ್ಲಪ್ಪ ಮಾದರ ಇದ್ದರು.
Published on

ಮುದ್ದೇಬಿಹಾಳ: ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಬದ್ಧ ಹಕ್ಕು ನಮಗೆ ದೊರೆತಿದೆ. ತಾಲೂಕಾ ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲೂ ಮಾದಿಗ ಸಮಾಜದವರು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಡಬೇಕು ಎಂದು ಮಾದಿಗ ದಂಡೋರಾ ಹೋರಾಟ ಸಮಿತಿಯ ತಾಲೂಕಾಧ್ಯಕ್ಷ ತಿಪ್ಪಣ್ಣ ದೊಡಮನಿ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಭಾನುವಾರ ಮಾದಿಗ ಸಮಾಜದಿಂದ ಹಮ್ಮಿಕೊಂಡಿದ್ದ ತಾಲೂಕಿನ ವಿವಿಧ ಗ್ರಾಪಂಗಳಿಗೆ ಆಯ್ಕೆಯಾದ ನೂತನ ಅಧ್ಯಕ್ಷರುಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾಲೂಕಿನ ಕೊಣ್ಣೂರು, ಬಿಜ್ಜೂರ, ಹುಲ್ಲೂರ, ತಂಗಡಗಿ ಹಾಗೂ ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಪಂನಲ್ಲಿ ಮಾದಿಗ ಸಮಾಜದ ಅಧ್ಯಕ್ಷರು ಆಯ್ಕೆಯಾಗಿರುವುದು ಸಂತಸವನ್ನುಂಟು ಮಾಡಿದೆ. ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು ಜಾತ್ಯಾತೀತ, ಪಕ್ಷಾತೀತವಾಗಿ ಎಲ್ಲ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕು. ಮತ್ತೊಬ್ಬರು ನಿಮ್ಮ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಬಿಡಬೇಡಿ ಎಂದರು.

ವಕೀಲರಾದ ಎಸ್.ಎಚ್. ಲೊಟಗೇರಿ, ಕೆ.ಬಿ. ದೊಡಮನಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ತುಳಿತಕ್ಕೊಳಗಾದ ಸಮಾಜಗಳಿಗೆ ನ್ಯಾಯ ದೊರೆತಿದೆ. ಗ್ರಾಪಂ ಅಧ್ಯಕ್ಷರಾಗಿದ್ದರೆ ಅದು ಅಂಬೇಡ್ಕರ್ ಅವರು ಕೊಟ್ಟ ಭಿಕ್ಷೆ, ಸರ್ವ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಿ ಎಂದು ಹೇಳಿದರು.

ಡಿಎಸ್‌ಎಸ್ ರಾಜ್ಯ ಮುಖಂಡ ಡಿ.ಬಿ. ಮುದೂರ, ದುರುಗಪ್ಪ ಗರಸಂಗಿ ಮಾತನಾಡಿದರು. ತಾಲೂಕಿನ ಕೊಣ್ಣೂರ ಗ್ರಾಪಂ ಅಧ್ಯಕ್ಷೆ ರೇಣುಕಾ ಮಾದರ, ತಂಗಡಗಿ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಮಾದರ, ಬಿಜ್ಜೂರ ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ಮಾದರ, ಹುಲ್ಲೂರ ಗ್ರಾಪಂ ಅಧ್ಯಕ್ಷೆ ಚೆನ್ನಮ್ಮ ಮಾದರ ಅವರನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು.

ಮುಖಂಡರಾದ ಬಾಲಚಂದ್ರ ಹುಲ್ಲೂರ, ಮಾರುತಿ ಸಿದ್ದಾಪುರ, ಮಲ್ಲಪ್ಪ ಬಸರಕೋಡ, ಅಶೋಕ ದೊಡಮನಿ, ಯಲ್ಲಪ್ಪ ಮಾದರ, ಹುಲಗಪ್ಪ ನಾಗರಬೆಟ್ಟ, ಮಂಜು ಪೂಜಾರಿ, ರಾಮಣ್ಣ ರಾಜನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net