ರಾಜಕೀಯ ಪ್ರಭಾವಕ್ಕೆ ಒಳಗಾಗಿರುವ ತಹಸೀಲ್ದಾರ್.!

Published on

ಅರಕಲಗೂಡು: ಪ್ರಾಮಾಣಿಕ ರಾಜಕಾರಣ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ಶಾಸಕ ಎ.ಟಿ. ರಾಮಸ್ವಾಮಿ ತಮ್ಮ ಜಮೀನು ಬಳಿಯ ಕಾಲುದಾರಿ ಒತ್ತವರಿ ಪ್ರಕರಣ ಕುರಿತಂತೆ ಲೋಕಾಯುಕ್ತರ ಮುಂದಿರುವ ದೂರನ್ನು ಕೈಬಿಡುವಂತೆ ತಹಶೀಲ್ದಾರ್ ಮೇಲೆ ಪ್ರಭಾವ ಬೀರಿ ವರದಿ ಸಲ್ಲಿಸಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಎಸ್.ಪಿ. ರೇವಣ್ಣ ಗಂಭೀರವಾಗಿ ಆರೋಪಿಸಿದರು.


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಸಲಹಳ್ಳಿ ಗ್ರಾಮದ ತಮ್ಮ ಜಮೀನಿಗೆ ಹೊಂದಿಕೊಂಡಂತೆ ಇದ್ದ ಸಾರ್ವಜನಿಕರು ಓಡಾಡಲು ಬಳಸುತ್ತಿದ್ದ ಬಿ ಕರಾಬ್ ಜಮೀನಿನಲ್ಲಿದ್ದ ಬಂಡಿ ದಾರಿಯನ್ನು ಒತ್ತುವರಿ ಮಾಡಿ ಬೇಲಿ ನಿರ್ಮಿಸಿದ್ದು ಇದರಿಂದ ಹಿಂಭಾಗದಲ್ಲಿರುವ ತಮ್ಮ ಜಮೀನುಗಳಿಗೆ ತರೆಳಲು ತೊಂದರೆಯಾಗಿದೆ ಇದನ್ನು ತೆರವುಗೊಳಿಸಿ ಕೊಡುವಂತೆ ಕೋರಿ ಶಹಜಾಹಾಂ ಬೇಗಂ, ಮೊಹಮದ್ ಘನಿ, ಮೊಹಮದ್ ರಿಜ್ವಾನ್ ಎಂಬುವವರು ಲೋಕಾಯುಕ್ಕೆ ದೂರು ಸಲ್ಲಿಸಿದ್ದರು. ಈ ಕುರಿತು ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯನ್ನು ಕೇಳಲಾಗಿತ್ತು. ತಹಸೀಲ್ದಾರ್ ಶ್ರೀನಿವಾಸ್ ನೀಡಿರುವ ವರದಿಯಲ್ಲಿ ಮೆಲ್ಕಂಡ ಜಮೀನು ಹಿಡುವಳಿದಾರರ ಸ್ವಾದೀನದಲ್ಲಿದೆ. 30 ಅಡಿ ಬೇರೆ ರಸ್ತೆ ನಿರ್ಮಿಸಲಾಗಿದೆ, ಸದರಿ ಪ್ರಕರಣವನ್ನು ಮುಕ್ತಾಯಗೊಳಿಸವಂತೆ ವರದಿಯಲ್ಲಿ ತಿಳಿಸಿದ್ದಾರೆ . ತಮ್ಮ ಜಮೀನಿನಲ್ಲಿ ಕಾಲುದಾರಿ ಒತ್ತುವರಿ ಮಾಡಿರುವ ಕುರಿತು ಆರೋಪ ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸುವಂತೆ ರಾಮಸ್ವಾಮಿಯೇ ತಹಸೀಲ್ದಾರ್‌ಗೆ ಪತ್ರ ಬರೆಯುತ್ತಾರೆ. ತಹಸೀಲ್ದಾರ್ ನೀಡಿರುವ ವರದಿಯಲ್ಲಿ ಹಿಡುವಳಿದಾರರ ಸ್ವಾದೀನದಲ್ಲಿದೆ ಎಂದು ಹೇಳುತ್ತಾರೆ. ಇದು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ನೀಡಿಸಿರುವ ವರದಿಯಾಗಿದೆ, ತಮ್ಮ ಪರವಾಗಿ ವರದಿ ನೀಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ತಹಶೀಲ್ದಾರ್ ವರ್ಗಾವಣೆಯಾದಾಗ ಹಿಂದೆ ಯಾವ ಅಧಿಕಾರಿಗಳು ವರ್ಗಾವಣೆಯಾದಾಗ ನಡೆಸದೆ ಅತ್ಯಂತ ವೈಭವದಿಂದ ಶ್ರೀನಿವಾಸ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಆರೋಪಿಸಿದರು.


ಬೆಂಗಳೂರಿನಲ್ಲಿ ಭೂ ಕಬಳಿಕೆಗೆ ಅಂಕುಶ ಹಾಕಿ ಪ್ರಭಾವಿಗಳನ್ನು ಮಟ್ಟಹಾಕಿರುವುದಾಗಿ ಹೇಳುವ ಶಾಸಕರು ಈ ಪ್ರಕರಣ ಕುರಿತು ಬಹಿರಂಗ ಚರ್ಚೆಗೆ ಬರಬೇಕು. ತಹಸೀಲ್ದಾರ್ ರಾಜಕೀಯ ಪ್ರಭಾವಕ್ಕೆ ಒಳಗಾಗಿರುವ ತಹಸೀಲ್ದಾರ್ ಕಾರ್ಯವೈಖರಿ ಖಂಡನೀಯ, ಅವರೊಬ್ಬ ಕಳ್ಳ ಎಂದು ತೀವ್ರ ವಾಗ್ದಾಳಿ ನಡೆಸಿದರು.


ಕಾಲು ದಾರಿಯಲ್ಲಿ ಬಿಜೆಪಿ ಮುಖಂಡ ವಾಸೀಂ ಅವರಿಗೆ ಅನ್ಯಾಯ ಆಗಿದೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದರೂ ಯೋಗಾರಮೇಶ್ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಹೊರತು ಪಕ್ಷದ ಕಾರ್ಯಕರ್ತನಿಗೆ ಆಗಿರುವ ಅನ್ಯಾಯ ಸರಿಪಡಿಸಿ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇತ್ತೀಚೆಗೆ ಪಟ್ಟಣದಲ್ಲಿ ನಡೆದ ಬಹುಗ್ರಾಮ ಕುಡಿಯುವ ನೀರಿನ ಶಂಕುಸ್ಥಾಪನೆ ಸರ್ಕಾರಿ ಕಾರ್ಯಕ್ರಮವಾಗಿದ್ದರೂ ತನ್ನನ್ನು ವೈಭವೀಕರಿಸಿಕೊಳ್ಳಲು ಸರ್ಕಾರಿ ಅಧಿಕಾರಿಗಳು, ವಸತಿ ಶಾಲೆಯ ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತೆಯರನ್ನು ಕರೆಸುವ ಮೂಲಕ ಆಡಳಿತವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಕ್ಕಳ ಮುಂದೆ ಶಾಸಕರು ತಮ್ಮ ಮಕ್ಕಳನ್ನು ಪರಿಚಯಿಸಿದ್ದಾರೆ ಎಂದು ಆಪಾದಿಸಿದರು.
ಮುಂದಿನ ಚುನಾವಣೆಯಲ್ಲಿ ದುಪ್ಪಟ್ಟು ಹಣ ಹಂಚುವುದಾಗಿ ಹೇಳಿಕೆ ನೀಡಿರುವ ಶಾಸಕರು ಒಬ್ಬ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ಯಾರ ಮನೆ ಬಾಗಿಲಿಗೂ ಟಿಕೆಟ್ ಕೇಳಲು ಹೋಗಿಲ್ಲ ಎನ್ನುವ ಶಾಸಕರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಮನೆ ಬಾಗಿಲಿಗೆ ಹೋಗಿದ್ದಾರೆ. ಅಲ್ಲಿ ಏನೂ ನಡೆಯದ ಕಾರಣ ಮತ್ತೆ ದೇವೇಗೌಡರ ಮನೆಗೆ ಹೋಗಿ ಬಿದ್ದು ಬೇಡಿಕೊಂಡಿದ್ದಾರೆ. ಆದರೆ ಜೆಡಿಎಸ್ ಕಾರ್ಯಕರ್ತರು ಶಾಸಕರಿಗೆ ಟಿಕೆಟ್ ನೀಡದಂತೆ ಒತ್ತಡ ಹಾಕಿರುವ ಹಿನ್ನಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆ ಸಮಾರಂಭಕ್ಕೆ ದೇವೇಗೌಡರೂ ಬರಲಿಲ್ಲ. ಶಾಸಕರು ಚುನಾವಣೆಗೆ ಸ್ಪರ್ಧಿಸಲು ಯಾವ ಪಕ್ಷ ಟಿಕೆಟ್ ಘೋಷಣೆ ಮಾಡಿದೆ ಎಂಬುದನ್ನಾದರೂ ಸ್ಪಷ್ಟಪಡಿಸಬೇಕು. ಪ್ರಾಮಾಣಿಕ ಎಂದು ಹೇಳಿಕೊಂಡು ಮತದಾರರಿಗೆ ಮೋಸ ಮಾಡುವ ನೀಚ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.


ಕಾಂಗ್ರೆಸ್ ಮುಖಂಡ ಲಾಲೂ ಸಾಹೇಬ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net