ರಾಜಕೀಯ ಪೈಪೋಟಿಗೆ ರೈತ ಹೈರಾಣ: ಹೂವು ಬೆಳೆಗಾರರು ಮತ್ತು ವರ್ತಕರಲ್ಲಿ ಭಿನ್ನಾಭಿಪ್ರಾಯ

28CBP2 -
Published on

ಚಿಕ್ಕಬಳ್ಳಾಪುರ: ನ್ಯಾಯಾಲಯದಲ್ಲಿ ಹೂವಿನ ಮಾರುಕಟ್ಟೆಯ ವಿವಾದ ಬಗೆಹರಿದ ಬಳಿಕವೂ ರಾಜಕೀಯ ಪ್ರಭಾವಿಗಳ ಕುಮ್ಮಕ್ಕಿನ ಹಿನ್ನೆಲೆಯಲ್ಲಿ ಹೂವು ಬೆಳೆಗಾರರು ಮತ್ತು ವರ್ತಕರಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು, ಬಡ ಮತ್ತು ಮಧ್ಯಮ ವರ್ಗದ ಬೆಳೆಗಾರರು ಹೈರಾಣಾಗುತ್ತಿದ್ದಾರೆ.

ಬಣಗಳ ಮುಸುಕಿನ ಗುದ್ದಾಟಕ್ಕೆ ವರ್ತಕರು ಮತ್ತು ರೈತರು ಮುಂದಾಗಿದ್ದು, ಒಂದು ಬಣ ಎಪಿಎಂಸಿ ಯಾರ್ಡಿನ ಹಳೇ ಮಾರುಕಟ್ಟೆಯಲ್ಲಿ, ಮತ್ತೊಂದು ಬಣ ತಾಲೂಕಿನ ಚೊಕ್ಕಹಳ್ಳಿ ಸಮೀಪದ ತಾತ್ಕಾಲಿಕ ಹೂವಿನ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಮುಂದಾಗಿರುವುದು ಗೊಂದಲ ಮೂಡಿಸಿದೆ. ಇದು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಬಗ್ಗೆ ಆತಂಕ ವ್ಯಕ್ತವಾಗಿದೆ.

ಜಿಲ್ಲಾ ಕೇಂದ್ರದಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಜಾಗದ ಸಮಸ್ಯೆ ಇದೆ. ಟ್ರಾಫಿಕ್ ಜಾಮ್ ಕಿರಿಕಿರಿಗೆ ಬಹುತೇಕರು ಉತ್ಪನ್ನಗಳನ್ನು ತರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಚೊಕ್ಕಹಳ್ಳಿ ಬಳಿ ಜಿಲ್ಲೆ ಮಾತ್ರವಲ್ಲದೇ ವಿವಿಧ ಭಾಗಗಳಿಂದ ವರ್ತಕರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂಬ ರಾಗವನ್ನು ಕೆಲ ಹೂವಿನ ವರ್ತಕರು ಎಳೆಯುತ್ತಿದ್ದಾರೆ. ಮತ್ತೊಂದೆಡೆ ನ್ಯಾಯಾಲಯದ ಮೆಟ್ಟಿಲೇರಿ, ಚೊಕ್ಕಹಳ್ಳಿಯಿಂದ ಜಿಲ್ಲಾ ಕೇಂದ್ರದಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ವಹಿವಾಟಿಗೆ ಅನುಮತಿ ಪಡೆದುಕೊಂಡ ಹೂವು ವ್ಯಾಪಾರಿಗಳು, ಎಪಿಎಂಸಿಯಲ್ಲಿನ ಅಂಗಡಿಗಳಲ್ಲಿ ಪರವಾನಗಿ ಪಡೆದ ವರ್ತಕರು ಸಮರ್ಪಕವಾಗಿ ವ್ಯವಹಾರ ನಡೆಸಲು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ರೈತರು ಮತ್ತು ವರ್ತಕರ ಮನವೊಲಿಸಲಾಗುವುದು ಎನ್ನುತ್ತಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಒಂದೆಡೆ ಜನಸಂದಣಿ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತವು ಹೂವಿನ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ತಾಲೂಕಿನ ಚೊಕ್ಕಹಳ್ಳಿ ಕ್ರಾಸ್ ಸಮೀಪದ ಖಾಸಗಿ ಜಮೀನಿಗೆ 2020ರ ಮಾ.27ರಂದು ಸ್ಥಳಾಂತರಿಸಿತ್ತು. ಆದರೆ, ಇಲ್ಲಿ ಮೂಲ ಸೌಕರ್ಯ ಒದಗಿಸುವಲ್ಲಿ ಕಡೆಗಣನೆ, ಕರೊನಾ ನಿಯಂತ್ರಣಕ್ಕೆ ಬಂದರೂ ಜಿಲ್ಲಾಡಳಿತವು ಎಪಿಎಂಸಿ ಮಾರುಕಟ್ಟೆಗೆ ಮರು ಸ್ಥಳಾಂತರಿಸದಿರುವುದು ಸಹಜವಾಗಿ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿದಾಗ ರೈತರು ಮತ್ತು ವರ್ತಕರ ಮನವಿಗೆ ಮಾನ್ಯತೆ ಸಿಕ್ಕಿತ್ತು.

ರಾಜಕೀಯ ಮಧ್ಯೆ ಪ್ರವೇಶ: ತಾತ್ಕಾಲಿಕ ಹೂವಿನ ಮಾರುಕಟ್ಟೆ ಕಾರ್ಯಾರಂಭದ ಮೊದಲಿನಿಂದಲೂ ರಾಜಕೀಯ ನಾಯಕರ ಮಧ್ಯೆ ಪ್ರವೇಶದ ವಿವಾದ ದೊಡ್ಡದಾಗಿದೆ. ರೈತರು, ವರ್ತಕರ ನಡುವೆ ಬಣಗಳು ಸೃಷ್ಟಿಯಾಗಿವೆ. ಪರಸ್ಪರ ಪ್ರತಿಷ್ಠೆಯಲ್ಲಿ ಅಭಿಪ್ರಾಯಕ್ಕೆ ಜೋತು ಬಿದ್ದು ಶತಾಯ ಗತಾಯ ನಿರ್ಧಾರದಿಂದ ಹಿಂದೆ ಸರಿಯಬೇಡಿ ಎಂಬ ನಾಯಕರ ಆದೇಶಕ್ಕೆ ಪಟ್ಟು ಹಿಡಿದು ಕುಳಿತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರ ಪೈಪೋಟಿ ನಡುವೆ ಬಡ ಮತ್ತು ಮಧ್ಯಮ ವರ್ಗದ ಬೆಳೆಗಾರರು ಹೈರಾಣಾಗುತ್ತಿದ್ದಾರೆ.

ತ್ವರಿತ ಪರಿಹಾರದ ನಿರೀಕ್ಷೆ: ಹೂವು, ಹಣ್ಣು, ತರಕಾರಿಗೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ ಮಾದರಿ ಮಾರುಕಟ್ಟೆ ನಿರ್ಮಾಣಕ್ಕೆ ಜಿಲ್ಲಾಡಳಿತವು ಮುಂದಾಗಿದೆ. ಈ ನಿಟ್ಟಿನಲ್ಲಿ ಸಚಿವ ಡಾ ಕೆ.ಸುಧಾಕರ್ ಸೂಕ್ತ ಜಾಗ ಮಂಜೂರು ಮಾಡಿಸಿ, ಅನುಕೂಲಕರ ಸಂಕೀರ್ಣ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಈಗಾಗಲೇ ತಿಪ್ಪೇನಹಳ್ಳಿ ಇಲ್ಲವೇ ಜಡಲತಿಮ್ಮನಹಳ್ಳಿ ಬಳಿ ಸರ್ಕಾರಿ ಜಾಗ ಗುರುತಿಸಲಾಗಿದೆ. ಆದಷ್ಟು ಬೇಗ ಅನುಮೋದನೆ ಪಡೆದು, ನಿರ್ಮಾಣ ಪ್ರಕ್ರಿಯೆ ಮುಗಿಸಲಾಗುವುದು ಎಂದು ಹೇಳಿದ್ದಾರೆ. ಇದು ತ್ವರಿತವಾಗಿ ಸಾಕಾರಗೊಂಡರೆ ಭಿನ್ನಾಭಿಪ್ರಾಯ ದೂರವಾಗಲಿದೆ ಎಂಬ ಮಾತು ಕೇಳಿ ಬಂದಿದೆ.

ಎಪಿಎಂಸಿ ಮಾರುಕಟ್ಟೆ ಸ್ಥಳಾಂತರ, ಕಾರ್ಯನಿರ್ವಹಣೆ ವಿಚಾರವಾಗಿ ರಾಜಕೀಯ ನಾಯಕರ ಕುಮ್ಮಕ್ಕು ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಕೆಲ ರೈತರು ಮತ್ತು ವರ್ತಕರು ಬೆಂಬಲಿಗರಾಗಿ ಗುರುತಿಸಿಕೊಳ್ಳುವಲ್ಲಿ ನಾನಾ ಬಣಗಳಾಗಿದ್ದು, ಇವರ ಗಲಾಟೆಯಲ್ಲಿ ಸಾಮಾನ್ಯರು ಪರದಾಡುವಂತಾಗಿದೆ. ಮುನೇಗೌಡ, ಹೂವು ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net